ಅಮೆರಿಕದ ಟೆನ್ನೆಸ್ಸೀಯಲ್ಲಿ ಸಣ್ಣ ವಿಮಾನ ಅಪಘಾತಕ್ಕೀಡಾಗಿದ್ದು, ವಿಮಾನದಲ್ಲಿದ್ದ 3 ಮಂದಿ ಸಾವನ್ನಪ್ಪಿದ್ದಾರೆ. ಅಮೆರಿಕದ ಟೆನ್ನೆಸ್ಸೀಯಲ್ಲಿ ಒಂದೇ ಎಂಜಿನ್ ಹೊಂದಿದ್ದ ವಿಮಾನ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂನಿ M20TN ವಿಮಾನವು ಟೆನ್ನೆಸ್ಸೀ ಸ್ಪಾರ್ಟಾದ ಗ್ರಾಮೀಣ ವಿಮಾನ ನಿಲ್ದಾಣದಿಂದ ಸುಮಾರು ಒಂದು ಮೈಲಿ ದಕ್ಷಿಣಕ್ಕೆ ಪತನಗೊಂಡಿದೆ ಎಂದು ಅಮೆರಿಕದ ವಾಯುಯಾನ ಕಾವಲು ಸಂಸ್ಥೆ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ಹೇಳಿಕೆ ತಿಳಿಸಿದೆ.
ವಿಮಾನದಲ್ಲಿದ್ದ ಮೂವರು ಜನರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮೃತರ ಗುರುತುಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.
ನಾರ್ತ್ ಎಂಡ್ ಸ್ವಯಂಸೇವಕ ಅಗ್ನಿಶಾಮಕ ಇಲಾಖೆ ಕೂಡ ವಿಮಾನ ದುರಂತದ ಬಗ್ಗೆ ಮಾಹಿತಿ ನೀಡಿದೆ.
ಏಪ್ರಿಲ್ 26 ರ ಶನಿವಾರ ಸ್ಥಳೀಯ ಸಮಯ ಮಧ್ಯಾಹ್ನ ಟೆನ್ನೆಸ್ಸೀಯಲ್ಲಿರುವ ಅಪ್ಪರ್ ಕಂಬರ್ಲ್ಯಾಂಡ್ ಪ್ರಾದೇಶಿಕ ವಿಮಾನ ನಿಲ್ದಾಣದ ದಕ್ಷಿಣಕ್ಕೆ ಮೂನಿ M20TN ಅಪಘಾತಕ್ಕೀಡಾಗಿದೆ. ಅದರಲ್ಲಿ ಮೂವರು ಜನರಿದ್ದರು. FAA ಮತ್ತು NTSB ತನಿಖೆ ನಡೆಸಲಿವೆ” ಎಂದು FAA ತಿಳಿಸಿದೆ.
ಒಂದೇ ಎಂಜಿನ್ ವಿಮಾನವು ಅಲಬಾಮಾದಿಂದ ಹೊರಟಿದ್ದು, ಟೆನ್ನೆಸ್ಸೀ ಸ್ಪಾರ್ಟಾದಲ್ಲಿರುವ ಅಪ್ಪರ್ ಕಂಬರ್ಲ್ಯಾಂಡ್ ಪ್ರಾದೇಶಿಕ ವಿಮಾನ ನಿಲ್ದಾಣದಲ್ಲಿ ಇಳಿಯಲು ಹೊರಟಿತ್ತು ಎಂದು ವಿಮಾನ ನಿಲ್ದಾಣದ ನಿರ್ದೇಶಕ ಸೆಲ್ಬಿ ತಿಳಿಸಿದ್ದಾರೆ.
ಅಪಘಾತದ ಕೆಲವು ಗಂಟೆಗಳ ನಂತರ FAA ಅಪಘಾತದ ಸ್ಥಳಕ್ಕೆ ಆಗಮಿಸಿತು, ಆದರೆ ತನಿಖೆಯನ್ನು ಮುನ್ನಡೆಸುತ್ತಿರುವ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ(NTSB), ಅದು ಭಾನುವಾರ ಟೆನ್ನೆಸ್ಸೀಗೆ ಆಗಮಿಸಲಿದೆ ಎಂದು ಹೇಳಿದೆ.