ಜೈಪುರದಲ್ಲಿ ಮಹಿಳೆಯೊಬ್ಬರು ತನ್ನ ಪ್ರಿಯಕರನ ಜೊತೆ ಸೇರಿ ತನ್ನ ಪತಿಯನ್ನು ಕೊಲೆ ಮಾಡಿದ್ದಾರೆ. ತನಿಖೆಯ ಸಮಯದಲ್ಲಿ, ಆರೋಪಿಗಳು ಇ-ರಿಕ್ಷಾ ಚಾಲಕ ಮನೋಜ್ ಹತ್ಯೆಯನ್ನು ಯೋಜಿಸಲು ವೆಬ್ ಸೀರಿಸ್ ವೀಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಹಿನ್ನೆಲೆ
ಸಂತೋಷ್ ದೇವಿ ಅವರು ಬೆಡ್ಶೀಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಸಹ-ಆರೋಪಿ ರಿಷಿ ಶ್ರೀವಾಸ್ತವ ಜತೆ ಸ್ನೇಹ ಬೆಳೆಸಿದರು. ಶ್ರೀವಾಸ್ತವ ಜೊತೆಗಿನ ಸ್ನೇಹ ಪ್ರೀತಿಗೆ ತಿರುಗಿದೆ. ನಂತರ ಇಬ್ಬರು ಮನೋಜ್ ಅವರನ್ನು ಕೊಲ್ಲಲು ಸಂಚು ರೂಪಿಸಿದರು.
ರಿಷಿಯ ಸ್ನೇಹಿತ ಮೋಹಿತ್ ಶರ್ಮಾ ಕೂಡ ಕೊಲೆ ಸ್ಕೆಚ್ ಗೆ ಸೇರಿಕೊಂಡರು, ಮತ್ತು ಮೂವರು ವ್ಯಕ್ತಿಗಳು ಕೊಲೆ ಮಾಡಲು ಹಾಗೂ ಅದರಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬ ಮಾರ್ಗಗಳನ್ನು ಹುಡುಕಿದರು. ತಮ್ಮ ಯೋಜನೆಯನ್ನು ಉತ್ತಮಗೊಳಿಸಲು ಅಪರಾಧಗಳು ಮತ್ತು ಪ್ರಸಿದ್ಧ ಕೊಲೆ ಪ್ರಕರಣಗಳ ಕುರಿತಾದ ವೆಬ್ ಸರಣಿಗಳನ್ನು ಸಹ ವೀಕ್ಷಿಸಿದರು. ಮೂವರು ಆರೋಪಿಗಳು ಹೊಸ ಸಿಮ್ ಕಾರ್ಡ್ಗಳನ್ನು ಖರೀದಿಸಿ ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸಬಹುದಾದ ಸ್ಥಳಗಳ ವೀಕ್ಷಣೆ ನಡೆಸಿದರು.
ಕಳೆದ ಶನಿವಾರ, ಮೋಹಿತ್ ಇಸ್ಕಾನ್ ದೇವಸ್ಥಾನಕ್ಕೆ ಹೋಗಲು ಮನೋಜ್ ಅವರ ಇ-ರಿಕ್ಷಾವನ್ನು ಬಾಡಿಗೆಗೆ ಪಡೆದರು. ಪ್ರಯಾಣದ ಸುಮಾರು 10 ನಿಮಿಷಗಳ ನಂತರ, ರಿಷಿ ಮೋಹಿತ್ನನ್ನು ಭೇಟಿಯಾದರು ಮತ್ತು ಇ-ರಿಕ್ಷಾವನ್ನು ನಿರ್ಜನ ತೋಟದ ಪ್ರದೇಶಕ್ಕೆ ಕೊಂಡೊಯ್ಯಲಾಯಿತು, ಅಲ್ಲಿ ತೀಕ್ಷ್ಣವಾದ ಬೆಡ್ಶೀಟ್ ಕಟ್ಟರ್ ಬಳಸಿ ಮನೋಜ್ ಅವರ ಕತ್ತು ಸೀಳಲಾಯಿತು. ನಂತರ ಇಬ್ಬರು ವ್ಯಕ್ತಿಗಳು ತಮ್ಮ ಬಟ್ಟೆ ಬದಲಾಯಿಸಿಕೊಂಡರು ಮತ್ತು ತಮ್ಮ ಸಿಮ್ ಕಾರ್ಡ್ಗಳನ್ನು ಸ್ವಿಚ್ ಆಫ್ ಮಾಡಿದರು.ಕೊಲೆ ನಡೆದ ಸ್ಥಳದಲ್ಲಿ ಸಿಸಿಟಿವಿಗಳು ಇಲ್ಲದ ಕಾರಣ, ಪೊಲೀಸರು ಹತ್ತಿರದ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿ ಆರೋಪಿಗಳನ್ನು ಪತ್ತೆಹಚ್ಚಿದರು.