ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ನನ್ನ ಬಳಿ ವಕೀಲರು ಇಲ್ಲ ಎಂದು ಪ್ರಜ್ವಲ್ ರೇವಣ್ಣ ನ್ಯಾಯಾಲಯಕ್ಕೆ ತಿಳಿಸಿದ ನಂತರ ನ್ಯಾಯಾಲಯ ಉಚಿತ ಕಾನೂನು ಸೇವೆ ಒದಗಿಸಿದೆ.
ಪ್ರಜ್ವಲ್ ಪರವಾಗಿ ವಾದಿಸಲು ಉಚಿತ ಕಾನೂನು ನೆರವಿನಡಿ ವಕೀಲರನ್ನು ಕೋರ್ಟ್ ನೇಮಕ ಮಾಡಿದೆ. ತಮ್ಮ ಪರವಾಗಿ ಮಂಡಿಸಲು ವಕೀಲರನ್ನು ನೇಮಿಸಿಕೊಳ್ಳದ ಪ್ರಜ್ವಲ್ ಗೆ ಸಾಕಷ್ಟು ಸಮಯ ನೀಡಿದರೂ ವಕೀಲರು ನಿಯೋಜನೆಯಾಗಲಿಲ್ಲ.
ಇಂದು ವಿಚಾರಣೆ ಪ್ರಾರಂಭವಾದಾಗ ವಕೀಲರು ದೊರೆತಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದು, ವಕೀಲರ ನೇಮಕಕ್ಕೆ ಸಮಯ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ಅವರ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ. ನಿನ್ನೆ ಕೂಡ ಅವರಿಗೆ ವಕೀಲರ ನೇಮಕಕ್ಕೆ ಕೊನೆಯ ಅವಕಾಶ ನೀಡಿತ್ತು. ಅವಕಾಶ ಬಳಸಿಕೊಳ್ಳದ ಕಾರಣ ಉಚಿತ ಕಾನೂನು ಸೇವೆಯಡಿ ವಕೀಲರನ್ನು ನಿಯೋಜನೆ ಮಾಡಲಾಗಿದೆ. ಆರ್.ಎಸ್. ಜಯಶ್ರೀ ಅವರು ಪ್ರಜ್ವಲ್ ರೇವಣ್ಣ ಪರವಾಗಿ ವಾದಕ್ಕೆ ನಿಯೋಜನೆ ಮಾಡಲಾಗಿದೆ.
ಪ್ರಜ್ವಲ್ ಪ್ರಕರಣದಲ್ಲಿ ವಕೀಲ ಜಿ. ಅರುಣ್ ಅವರು ವಕಾಲತ್ತಿನಿಂದ ಹಿಂದೆ ಸರಿದ ಕಾರಣಕ್ಕೆ ಹೊಸ ವಕೀಲರನ್ನು ನೇಮಿಸಿಕೊಳ್ಳಲು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಅವಕಾಶ ನೀಡಿತ್ತು.