ಮೈಸೂರು: ಧರ್ಮಸ್ಥಳ ವಿಚಾರವಾಗಿ ಬಿಜೆಪಿ ನಾಯಕರು ನಡೆಸಿರುವುದು ಧರ್ಮ ಯಾತ್ರೆಯಲ್ಲ, ರಾಜಕೀಯ ಯಾತ್ರೆ. ಬರೀ ರಾಜೀಯಕ್ಕಾಗಿ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಧರ್ಮಸ್ಥಳ ಪ್ರಕರಣದಲ್ಲಿ ಎಸ್ ಐಟಿ ರಚನೆ ಮಾಡಿದ್ದನ್ನು ಆರಂಭದಲ್ಲಿ ಬಿಜೆಪಿಯವರೇ ಸ್ವಾಗತಿಸಿದ್ದರು. ಈಗ ಎಸ್ ಐಟಿ ಅಲ್ಲ, ಎನ್ ಐಎ ತನಿಖೆಯಾಗಬೇಕು ಎನ್ನುತ್ತಿದ್ದಾರೆ. ಧರ್ಮಾಅಧಿಕಾರಿ ವೀರೇಂದ್ರ ಹೆಗ್ಗಡೆ ಅವರೇ ಎಸ್ ಐಟಿ ರಚನೆ ಸ್ವಾಗತಿಸಿದ್ದಾರೆ, ಸತ್ಯಾಸತ್ಯತೆ ಹೊರಬರಲಿ ಎಂದಿದ್ದಾರೆ. ಈಗ ಬಿಜೆಪಿಯವರು ರಾಜಕೀಯ ನಾಟಕವಾಡುತ್ತಿದ್ದಾರೆ. ಎಸ್ ಐಟಿ ತನಿಖೆ ಬಗ್ಗೆ ಆರೋಪಿಸಲು ಇವರಿಗೆ ನಮ್ಮ ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂದಂತಾಯಿತು. ಎನ್ ಐಎ ಅಧಿಕಾರಿಗಳ ಮೇಲೆ ಮಾತ್ರ ನಂಬಿಕೆಯೇ? ಯಾಕೆ ನಮ್ಮ ರಾಜ್ಯದ ಪೊಲೀಸರ ಮೇಲೆ ನಂಬಿಕೆಯಿಲ್ಲವೇ? ಸರ್ಮರ್ಥವಾಗಿ ತನಿಖೆ ನಡೆಸುತ್ತಿಲ್ಲವೇ? ಎಂದು ಗುಡುಗಿದರು.
ಧರ್ಮಸ್ಥಳದ ಬಗ್ಗೆ ಇವರೇ ಅಪಪ್ರಚಾರ ಮಾಡುತ್ತಿದ್ದಾರೆ. ಇದು ಬಿಜೆಪಿ ಯಾತ್ರೆಯಲ್ಲ, ರಾಜಕೀಯ ಯಾತ್ರೆ. ಇದನ್ನೆಲ್ಲ ಮಾಡಲು ಬಿಜೆಪಿಯವರಿಗೆ ದುಡ್ಡು ಬಂದಿರಬಹುದು. ಬಿಜೆಪಿಯವರಿಗೆ ಇಷ್ಟೆಲ್ಲ ಮಾಡಲು ದುಡ್ಡು ಎಲ್ಲಿಂದ ಬರುತ್ತಿದೆ? ದುಡ್ದು ಕೊಡುತ್ತಿರುವವರು ಯಾರು? ಇವರು ರಾಜಕೀಯಕ್ಕಾಗಿ ಈ ರೀತಿ ಮಾಡುತ್ತಿರುವುದು ತಪ್ಪು ಎಂದು ವಾಗ್ದಾಳಿ ನಡೆಸಿದರು.