BIG NEWS: ಬೊಮ್ಮಾಯಿ ಕೇಂದ್ರ ಸರ್ಕಾರದ ಆರ್ಥಿಕ ದುಸ್ಥಿತಿ ಎನ್ನುವ ಬದಲು ಬಾಯಿ ತಪ್ಪಿ ರಾಜ್ಯ ಸರ್ಕಾರ ಎಂದು ಹೇಳುತ್ತಿದ್ದಾರೆ; ಮಾಜಿ ಸಿಎಂ ಕಾಲೆಳೆದ ಸಿಎಂ

ಬೆಂಗಳೂರು: ಬರಪರಿಹಾರ ಬಿಡುಗಡೆ ವಿಚಾರವಾಗಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿಪಕ್ಷ ಬಿಜೆಪಿ ನಾಯಕರ ಆರೋಪ-ಪ್ರತ್ಯಾರೋಪ ಮುಂದುವರೆದಿದೆ. ಭೀಕರ ಬರದಿಂದ ರೈತರು ಕಂಗೆಟ್ಟಿದ್ದರೂ ರಾಜ್ಯ ಸರ್ಕಾರ ಪರಿಹಾರ ಹಣ ಬಿಡುಗಡೆ ಮಾಡಿಲ್ಲ. ಇದು ರಾಜ್ಯ ಸರ್ಕಾರದ ಆರ್ಥಿಕ ದುಸ್ಥಿತಿ ತೋರುತ್ತದೆ ಎಂದು ಕಿಡಿಕಾರಿದ್ದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ, ಬರಪರಿಹಾರ ಬಿಡುಗಡೆಗೆ ಕೇಂದ್ರ ಸರ್ಕಾರದ ಆರ್ಥಿಕ ದುಸ್ಥಿತಿ ಕಾರಣ ಎಂದು ಬಸವರಾಜ ಬೊಮ್ಮಾಯಿ ಅವರು ಹೇಳಬೇಕಾಗಿತ್ತು, ಬಾಯಿ ತಪ್ಪಿ ಕೇಂದ್ರ ಸರ್ಕಾರದ ಬದಲಿಗೆ ರಾಜ್ಯ ಸರ್ಕಾರ ಎಂದು ಹೇಳಿದಂತೆ ಕಾಣುತ್ತಿದೆ ಎಂದು ಕಿಚಾಯಿಸಿದ್ದಾರೆ.

ಬರಪರಿಹಾರದ ಕೆಲಸಗಳಿಗಾಗಿ 18,177 ಕೋಟಿ ರೂಪಾಯಿ ನೀಡಲು ಮೂರು ತಿಂಗಳುಗಳಿಂದ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದೇವೆ. ಪತ್ರ ಬರೆದಿದ್ದೇವೆ, ಇಲ್ಲಿಯ ವರೆಗೆ ನಯಾಪೈಸೆ ಹಣ ನೀಡಿಲ್ಲ. ಕೇಂದ್ರ ಸರ್ಕಾರದ ಇಂತಹ ಕಠಿಣ ನಿಲುವಿಗೆ ಒಂದೋ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ದ್ವೇಷದ ರಾಜಕಾರಣ ಕಾರಣ ಇರಬಹುದು, ಇಲ್ಲವೇ ಕೇಂದ್ರ ಸರ್ಕಾರದ ಆರ್ಥಿಕ ದುಸ್ಥಿತಿ ಕಾರಣವಾಗಿರಬಹುದು. ಅದೇನು ಎನ್ನುವುದನ್ನು ಬೊಮ್ಮಾಯಿಯವರೇ ರಾಜ್ಯದ ಜನತೆಗೆ ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಮಳೆಗಾಲ ಕಳೆದುಹೋಗಿ ರಾಜ್ಯ ಬೇಸಿಗೆ ಕಾಲಕ್ಕೆ ಕಾಲಿಡುತ್ತಿದೆ. ಕಳೆದ ಆರು ತಿಂಗಳಿಂದ ಬರಪೀಡಿತ ಪ್ರದೇಶದ ರೈತರು ಕಡುಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಬರಪೀಡಿತ ರೈತ ಕುಟುಂಬಕ್ಕೆ ತಲಾ ಎರಡು ಸಾವಿರ ರೂಪಾಯಿ ನಗದಿನ ಜೊತೆ ಸಾಧ‍್ಯ ಇರುವ ಎಲ್ಲ ನೆರವನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಅನ್ನಭಾಗ್ಯವೂ ಸೇರಿದಂತೆ ನಮ್ಮ ಗ್ಯಾರಂಟಿ ಯೋಜನೆಗಳಿಂದಾಗಿ ಜನತೆ ಕಷ್ಟ-ನಷ್ಟದ ನಡುವೆಯೂ ಉಸಿರಾಡುವಂತಾಗಿದೆ. ಹೀಗಿದ್ದರೂ ಕಟುಕನಂತೆ ವರ್ತಿಸುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರ ಬರಪರಿಹಾರ ನೀಡದೆ ಸತಾಯಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಕೇಂದ್ರ ಸರ್ಕಾರದ ರಾಜ್ಯ ವಿರೋಧಿ ನೀತಿಯಿಂದಾಗಿ ತೆರಿಗೆ ಹಂಚಿಕೆಯಲ್ಲಿಯೂ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಜಿಎಸ್‌ಟಿ ಪಾವತಿಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿ ಇದ್ದರೂ ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯ ಈಗ ಜಗಜ್ಜಾಹೀರಾಗಿದೆ. ಸ್ಥಳೀಯ ಸಂಸ್ಥೆಗಳು, ವಿಪತ್ತು ನಿರ್ವಹಣೆ ಮತ್ತು ಆರೋಗ್ಯ ಕ್ಷೇತ್ರಗಳಿಗೆ 2021-22ರಿಂದ 2023-24ರ ವರೆಗಿನ ಮೂರು ವರ್ಷಗಳ ಅವಧಿಗೆ 29,110 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕಾಗಿತ್ತು, ಬಿಡುಗಡೆಗೊಳಿಸಿದ್ದು ಕೇವಲ 11,449 ಕೋಟಿ ರೂಪಾಯಿ ಮಾತ್ರ. ವಿಪತ್ತು ನಿರ್ವಹಣೆಗೆ ಅನುದಾನದ ರೂಪದಲ್ಲಿ ಕೇಂದ್ರ ಸರ್ಕಾರವೇ ನಿಗದಿಗೊಳಿಸಿರುವ ಮಾನದಂಡಗಳನ್ನು ಆಧರಿಸಿ ಹದಿನೈದನೆ ಹಣಕಾಸು ಆಯೋಗದ ಶಿಫಾರಸ್ಸಿನಂತೆ ರೂ.4,369 ಕೋಟಿ ನೀಡಬೇಕಾಗಿತ್ತು. ಆದರೆ ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡಿರುವುದು ಕೇವಲ ರೂ.1,803 ಕೋಟಿ ಮಾತ್ರ. ಆರು ತಿಂಗಳುಗಳ ಹಿಂದೆ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿದ್ದರು. ಆದರೆ ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯದ ವಿರುದ್ದ ಮಾತೆತ್ತುವ ಧೈರ್ಯ ಮಾಡದೆ ರಾಜ್ಯದ ರೈತರಿಗೆ ದ್ರೋಹ ಎಸಗಿ ಈಗ ನಮ್ಮ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ನಾಲ್ಕು ವರ್ಷಗಳ ಆಳ್ವಿಕೆಯಲ್ಲಿ ದುರಾಡಳಿತ ಮತ್ತು ಭ್ರಷ್ಟಾಚಾರದಿಂದಾಗಿ ಕರ್ನಾಟಕ ರಾಜ್ಯವನ್ನು ದಿವಾಳಿ ಸ್ಥಿತಿಗೆ ತಂದಿಟ್ಟಿದ್ದರು. ಸಾವಿರಾರು ಕೋಟಿ ರೂಪಾಯಿಗಳ ಬಾಕಿ ಬಿಲ್ ಗಳನ್ನು ನಾವು ಪಾವತಿ ಮಾಡಬೇಕಾಗಿದೆ. ಈಗ ತಮ್ಮ ಪಾಪದ ಹೊರೆಯನ್ನು ನಮ್ಮ ಸರ್ಕಾರದ ಹೆಗಲಿಗೆ ಹೊರಿಸಲು ಬೊಮ್ಮಾಯಿಯವರು ಒದ್ದಾಡುತ್ತಿದ್ದಾರೆ. ರಾಜ್ಯದ ಜನತೆಗೆ ಸತ್ಯ ತಿಳಿದಿದೆ ಎಂದು ಗುಡುಗಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read