ಬೆಳಗಾವಿ: ಕೇಂದ್ರದ ಬಿಜೆಪಿಯ ತಪ್ಪು ನೀತಿಗಳಿಂದಾಗಿ ಅಗತ್ಯ ಸಾಮಾಗ್ರಿಗಳ ಬೆಲೆ ಏರಿಕೆ ಹೆಚ್ಚಿದ್ದು, ಬಿಜೆಪಿಯವರು ಸರ್ಕಾರವನ್ನು ಪ್ರಶ್ನಿಸುವ ನೈತಿಕತೆ ಹೊಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೆಳಗಾವಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯಾದ್ಯಂತ ಬಿಜೆಪಿಯವರು ಜನಾಕ್ರೋಶ ಯಾತ್ರೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಪೆಟ್ರೋಲ್ , ಡೀಸೆಲ್, ಗ್ಯಾಸ್ ಬೆಲೆ ಸೇರಿದಂತೆ ಅವಶ್ಯಕ ವಸ್ತುಗಳ ಬೆಲೆ ಏರಲು ಕಾರಣ ಕೇಂದ್ರದ ಬಿಜೆಪಿ ಸರ್ಕಾರದವರೇ. ರಾಜ್ಯಸರ್ಕಾರ ಹೆಚ್ಚಿಸಿರುವ ಹಾಲಿನ ದರದಿಂದ ರೈತರಿಗೆ ಲಾಭ ಹೋಗುತ್ತದೆ. ಪೆಟ್ರೋಲ್ ಹಾಗೂ ಡೀಸೆಲ್ ನ ಕಚ್ಚಾ ತೈಲದ ಬೆಲೆಯ ಮೇಲೆ ದರ ನಿಗದಿಯಾಗುತ್ತದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲಕ್ಕೆ 120 ಡಾಲರ್ ಇದ್ದು, ಈಗ 65 ಡಾಲರ್ ಗೆ ಇಳಿದಿದೆ. ಅಂದು ಗ್ಯಾಸ್ ಸಿಲಿಂಡರ್ ಬೆಲೆ 400 ರೂ. ಇದ್ದು, 800 ರೂ. ಕ್ಕೂ ಮೀರಿದೆ.ಆದರೂ ಪೆಟ್ರೋಲ್ ಡೀಸೆಲ್ ಬೆಲೆಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿರುವ ಬಗ್ಗೆ ಜನರು ಪ್ರಶ್ನೆ ಕೇಳಬೇಕಿದೆ. ಸರ್ಕಾರ ಆರ್ಥಿಕ ದಿವಾಳಿಯಾಗಿದೆ ಎಂಬ ಬಿಜೆಪಿಯವರ ಆರೋಪಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಬಿಜೆಪಿಯವರ ಕಾಲದಲ್ಲಿ ಅನುದಾನವಿಲ್ಲದಿದ್ದರೂ, ಕಾಮಗಾರಿಗಳಿಗೆ ಮಂಜೂರಾತಿ ನೀಡಿ, ಟೆಂಡರ್ ಪ್ರಕ್ರಿಯೆ ಕೈಗೊಂಡಿದ್ದರು. ಈಗ ನಮಗೆ ಪಾಠ ಹೇಳುತ್ತಿದ್ದು, ಆರ್ಥಿಕ ದಿವಾಳಿಯಾಗಿದ್ದರೆ, ಅದಕ್ಕೆ ಬಿಜೆಪಿಯವರೇ ಕಾರಣ ಎಂದರು.
ಗ್ಯಾರಂಟಿಗಳಿಂದಲೇ ಆರ್ಥಿಕತೆ ಹಾಳಾಗಿದೆ ಎಂದು ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಹೇಳಿರುವ ಬಗ್ಗೆ ಉತ್ತರ ನೀಡುತ್ತಾ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಅವರ ಸರ್ಕಾರದ ಅವಧಿಯಲ್ಲಿಯೇ ರಾಜ್ಯದ ಆರ್ಥಿಕತೆ ಕುಸಿದಿತ್ತು. ನಾವು ಹಿಂದಿನ ವರ್ಷಕ್ಕಿಂತ ಈ ಸಾಲಿನ ಬಜೆಟ್ ನ ಪ್ರಮಾಣ ಸುಮಾರು 38 ಸಾವಿರ ಕೋಟಿಯಷ್ಟು ಹೆಚ್ಚಿಸಲಾಗಿದೆ. ಇದು ನಮ್ಮ ಸರ್ಕಾರದ ಆರ್ಥಿಕ ದಿವಾಳಿತನವೇ ಎಂದು ಪ್ರಶ್ನಿಸಿದರು.
ದೇಶದ ಸಾಲ ನಾಲ್ಕು ಪಟ್ಟು ಹೆಚ್ಚಲು ಮೋದಿಯವರೇ ಕಾರಣ. ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುವ ಮುಂಚೆ ದೇಶದ ಮೇಲೆ 5311000 ಕೋಟಿ ಸಾಲವಿತ್ತು. ಆದರೆ ಈಗ 200 ಲಕ್ಷ ಕೋಟಿಗೆ ಸಾಲ ಹೆಚ್ಚಿದೆ. ದೇಶದ ಸಾಲ ಮೊತ್ತ ನಾಲ್ಕು ಪಟ್ಟು ಹೆಚ್ಚಲು ನರೇಂದ್ರ ಮೋದಿಯವರೇ ಕಾರಣ ಎಂದು ಗುಡುಗಿದರು.