ಬೆಂಗಳೂರು: ಮೆಟ್ರೋ ಯೋಜನೆಗೆ ರಾಜ್ಯ ಸರ್ಕಾರ ಶೇ. 87.37 ರಷ್ಟು ಹಣ ನೀಡುತ್ತಿದ್ದು ಕೇಂದ್ರ ಸರ್ಕಾರದ ಪಾಲು ಕೇವಲ ಶೇ12.63 ರಷ್ಟಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಿಸಿದ್ದಾರೆ.
ಮೆಟ್ರೋ ಯೋಜನೆಯ ಹಳದಿ ಮಾರ್ಗದ ಉದ್ಘಾಟನೆ ಹಾಗೂ ಮೆಟ್ರೋ ಹೊಸ ಯೋಜನೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ಸಹಭಾಗಿತ್ವವೂ ಸಹ ಬೆಂಗಳೂರು ಮೆಟ್ರೋ ಯೋಜನೆಯ ಅನುಷ್ಠಾನಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರ ಮೆಟ್ರೋ ಯೋಜನೆ ಹಂತ 1,2 ಮತ್ತು 2ಎ, 2ಬಿ ಮತ್ತು ಹಂತ 3 ಅನುಷ್ಠಾನಕ್ಕೆ ತನ್ನ ಪಾಲಿನ ರೂ. 25,387 ಕೋಟಿ ಒದಗಿಸಿದ್ದು, ಇದರೊಂದಿಗೆ ಹೆಚ್ಚುವರಿ ಹಣಕಾಸು ನೆರವಿನ ರೂಪದಲ್ಲಿ ಸಾಲ ಮರುಪಾವತಿಗಾಗಿ ರೂ.3,987 ಕೋಟಿ ಒದಗಿಸಿದೆ. ಮೆಟ್ರೋ ಯೋಜನೆಗಳಿಗಾಗಿ ಇದುವರೆಗೂ 59139 ಕೋಟಿ ರೂ ಅನುದಾನವನ್ನು ವಿನಿಯೋಗಿಸಲಾಗಿದೆ. ರಾಜ್ಯ ಸರ್ಕಾರದ ಜವಾಬ್ಧಾರಿ ಶೇ. 87.37 ರಷ್ಟಿದೆ. ಕೇಂದ್ರ ಸರ್ಕಾರವು ತನ್ನ ಖಜಾನೆಯಿಂದ ಕೊಟ್ಟಿರುವುದು ಶೇ. 12.63 ರಷ್ಟು. ಕೇಂದ್ರ ಸರ್ಕಾರ ಒದಗಿಸಿರುವುದು 7468.86 ಕೋಟಿ ರೂಗಳು ಮಾತ್ರ ಎಂದರು.
ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಸರ್ಕಾಗಳು ಶೇ.50;50 ಅನುಪಾತದಲ್ಲಿ ಹೂಡಿಕೆ ಮಾಡಬೇಕೆಂದು ಒಪ್ಪಂದವಾಗಿದೆ. ಆದರೆ ಕೇಂದ್ರ ಸರ್ಕಾರದಿಂದ ಈಕ್ವಿಟಿಯ ಹೊರತಾಗಿ ಸಾಲದ ರೂಪದಲ್ಲಿ ಬಂದ ಹಣವನ್ನು ಬಡ್ಡಿ ಸಮೇತ ರಾಜ್ಯ ಸಕಾರ ಹಾಗೂ ಮೆಟ್ರೋ ಸಂಸ್ಥೆಗಳು ತೀರಿಸಬೇಕಾಗಿದೆ ಎಂದರು. ಇದರಿಂದ ರಾಜ್ಯದ ಮೇಲೆ, ನಮ್ಮ ಮೇಲೆ ಶೇ.87.37 ರಷ್ಟು ಭಾರವಿದೆ ಎಂದು ಪ್ರಧಾನಮಂತ್ರಿಗಳಿಗೆ ಮನವರಿಕೆ ಮಾಡಿಸಬಯಸುತ್ತೇನೆ ಎಂದರು.
ಮೆಟ್ರೊ ಹಳದಿ ಮಾರ್ಗದ ಉದ್ಘಾಟನೆಯಿಂದ ಬೆಂಗಳೂರು ಮೆಟ್ರೋ ಒಟ್ಟು 96.10 ಕಿ.ಮೀ ಕಾರ್ಯಾಚರಣೆಯೊಂದಿಗೆ ದಕ್ಷಿಣ ಭಾರತದಲ್ಲಿಯೇ ಅತಿ ಉದ್ದದ ಮೆಟ್ರೊ ಜಾಲದ ಗೌರವಕ್ಕೆ ಪಾತ್ರವಾಗಿದೆ. ಇದು ಪ್ರತಿಯೊಬ್ಬ ಕನ್ನಡಿಗನಿಗೆ ಹೆಮ್ಮೆಯ ಕ್ಷಣವಾಗಿದ್ದು, ಅಭಿವೃದ್ಧಿಯ ಕಡೆಗಿನ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ಬೆಂಗಳೂರಿನ ಬೆಳವಣಿಗೆ ಮತ್ತು ರಾಷ್ಟ್ರದ ಅಭಿವೃದ್ಧಿಯ ದೃಷ್ಟಿಯಿಂದ ನಮ್ಮ ಮೆಟ್ರೋಗೆ ಹೆಚ್ಚಿನ ಅನುದಾನಗಳನ್ನು ಒದಗಿಸಬೇಕೆಂದು ಮನವಿ ಮಾಡಿದರು.
ನಾಗರಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪರಸ್ಪರ ಸಹಕಾರ, ಒಕ್ಕೂಟ ವ್ಯವಸ್ಥೆಯ ಬುನಾದಿಯನ್ನು ಇನ್ನಷ್ಟು ಬಲಪಡಿಸುವ ವಿಶ್ವಾಸ ನನಗಿದೆ ಎಂದರು.
ಇಂದು ಲೋಕಾರ್ಪಣೆಗೊಂಡಿರುವ ರೂ.7,160 ಕೋಟಿ ವೆಚ್ಚದ ಹಳದಿ ಲೇನ್ ಬೆಂಗಳೂರಿನ ಪ್ರಮುಖ ಐಟಿ ಮತ್ತು ತಂತ್ರಜ್ಞಾನ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ವೃತ್ತಿಪರರಿಗೆ, ಉದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ಸುರಕ್ಷಿತ ಮತ್ತು ತ್ವರಿತ ಪ್ರಯಾಣವನ್ನು ಖಾತ್ರಿಪಡಿಸುತ್ತದೆ. ಪ್ರತಿನಿತ್ಯ ಸುಮಾರು 3.5 ಲಕ್ಷ ಪ್ರಯಾಣಿಕರು ಹಳದಿ ಲೇನ್ ಬಳಸುವ ನಿರೀಕ್ಷೆಯಿದೆ. ಇದರಿಂದ ಮುಖ್ಯವಾಗಿ ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಜಯದೇವ ಆಸ್ಪತ್ರೆ ಸುತ್ತಲಿನ ಭಾರೀ ಟ್ರಾಫಿಕ್ ಸಮಸ್ಯೆ ಸುಧಾರಿಸುವ ವಿಶ್ವಾಸವಿದೆ. ಈ ಹಳದಿ ಲೇನ್ ಪ್ರಮುಖ ಬಯೋಟೆಕ್ ಮತ್ತು ಐಟಿ ಹಬ್ ಗಳನ್ನು ಪರಸ್ಪರ ಜೋಡಿಸುತ್ತದೆ ಮಾತ್ರವಲ್ಲದೆ ಹಲವು ಪ್ರಮುಖ ಆಸ್ಪತ್ರೆಗಳು ಮತ್ತು ಕೈಗಾರಿಕಾ ವಲಯಗಳಿಗೂ ಸುಲಭದ ಸಂಪರ್ಕ ಸಾಧ್ಯವಾಗಿಸಿದೆ. ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗೆ ರಾಜ್ಯ ಸರ್ಕಾರದ ಅನುದಾನದಲ್ಲಿ ನಿರ್ಮಿಸಲಾಗಿರುವ ಡಬಲ್ ಡೆಕ್ಕರ್ ಫ್ಲೈಓವರ್, ಬೆಂಗಳೂರಿನ ಅತ್ಯಂತ ನಿಬಿಡ ಜಂಕ್ಷನ್ಗಳಲ್ಲಿನ ಸಂಚಾರ ವ್ಯವಸ್ಥೆಯನ್ನು ಸುಧಾರಿಸಲಿದೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂಬುವುದಕ್ಕೆ ಇದು ನಿದರ್ಶನವಾಗಿದೆ ಎಂದರು.