ವಿಜಯನಗರ: ದೇಶಕಂಡ ಅಪ್ರತಿಮ ಆಡಳಿತಗಾರ, ವಿಜಯನಗರದ ಅರಸ ಶ್ರೀಕೃಷ್ಣದೇವರಾಯ ಅವರ ಸಮಾಧಿ ಈಗ ಮಾಂಸ ಸ್ವಚ್ಛಮಾಡುವ ಸ್ಥಳವಾಗಿ ಮಾರ್ಪಟ್ಟಿರುವುದು ನಿಜಕ್ಕೂ ದುರಂತವೇ ಸರಿ. ಶ್ರೀಕೃಷ್ಣದೇವರಾಯ ಸಮಾಧಿ ಮೇಲೆ ಮಾಂಸ ಸ್ವಚ್ಛ ಮಾಡುತ್ತಿರುವ, ಪಕ್ಕದಲ್ಲಿಯೇ ಕುರಿಯನ್ನು ಕಟ್ಟಿ ಹಾಕಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಬಲಿಯ ತುಂಗಭದ್ರಾ ನದಿಯ ದಡದಲ್ಲಿ ವಿಜಯನಗರ ಸಾಮ್ರಾಜ್ಯದ ಶ್ರೇಷ್ಠ ಅರಸ ಶ್ರೀಕೃಷ್ಣದೇವರಾಯರ ಸಮಾಧಿಯಿದೆ. ಈ ಸಮಾಧಿ ಮೇಲೆ ಕಿಡಿಗೇಡಿಗಳು ಮಾಂಸ ಸ್ವಚ್ಛಗೊಳಿಸಿದ್ದಾರೆ. 64 ಕಂಬಗಳನ್ನು ಒಳಗೊಂಡಿರುವ ಕೃಷ್ಣದೇವರಾಯರ ಸಮಾಧಿ ಮಂಟಪದ ಒಂದು ಕಂಬಕ್ಕೆ ದುಷ್ಕರ್ಮಿಗಳು ಮೇಕೆ ಕಟ್ಟಿಹಾಕಿ ಮಾಂಸ ಸ್ವಚ್ಛಗೊಳಿಸಿದ್ದಾರೆ. ಈ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ಭಾರತೀಯ ಇತಿಹಾಸದಲ್ಲಿ ಶ್ರೇಷ್ಠ ಆಡಳಿತಗಾರರಾಗಿದ್ದ ವಿಜಯನಗರದ ಶ್ರೀ ಕೃಷ್ಣದೇವರಾಯರ ಸಮಾಧಿಯ ದುಸ್ಥಿತಿ ಇದು. ಈ ಜಾಗವನ್ನು ಅಕ್ಷರಶಃ ಮಾಂಸದ ಮಾರುಕಟ್ಟೆಯಾಗಿ ಕೆಲ ಸ್ಥಳೀಯರು ಪರಿವರ್ತಿಸಿರುವುದು ಕನ್ನಡ ನಾಡಿನ ಹೆಮ್ಮೆಯ ಅರಸರಾದ ಅಸಾಮಾನ್ಯ ಆಡಳಿತಗಾರ, ಅಪ್ರತಿಮ ದಂಡನಾಯಕ ಶ್ರೀ ಕೃಷ್ಣದೇವರಾಯರಿಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೂ ದೇವಾಲಯಗಳನ್ನು ಕೆಡವಿ, ದೇಶದ ಸಂಪತ್ತನ್ನು ದೋಚಿ, ಸಾವಿರಾರು ಹಿಂದೂಗಳನ್ನು ಅಮಾನವೀಯಗಿ ಕೊಂದ ಔರಂಗಜೇಬನ ಸಮಾಧಿಗೆ ಪುರಾತತ್ವ ಸರ್ವೇಕ್ಷಣಾ ಇಲಾಖೆ [ASI] ತೆರಿಗೆದಾರರ ಹಣದಿಂದ ಸಂರಕ್ಷಣೆ ಮಾಡುತ್ತಿದೆ; ಆದರೆ, ವಿಜಯನಗರ ಸಾಮ್ರಾಜ್ಯವನ್ನು ವಿಸ್ತರಿಸಿದ ಪರಾಕ್ರಮಿ; ಕಲೆ,ಸಾಹಿತ್ಯ ರಂಗಗಳ ಪೋಷಕ ಶ್ರೀ ಕೃಷ್ಣದೇವರಾಯರ ಸಮಾಧಿಗೆ ಏಕೆ ಈ ರೀತಿಯಾದ ದಿವ್ಯ ನಿರ್ಲಕ್ಷ್ಯ ?
ಇದು ಕನ್ನಡಿಗರಿಗಷ್ಟೇ ಅಲ್ಲ ರಾಷ್ಟ್ರಕ್ಕೆ ಮಾಡಿದ ಅವಮಾನ, ಮಾಂಸವನ್ನು ಮಾರುತ್ತ ಸ್ಥಳದ ಪಾವಿತ್ರ್ಯತೆಯನ್ನು ಹಾಳು ಮಾಡುತ್ತಿರುವ ಇಂತವರನ್ನು ಜಿಲ್ಲಾಡಳಿತ ಕೂಡಲೇ ಜಾಗ ಖಾಲಿ ಮಾಡಲು ಸೂಚಿಸಬೇಕು ಹಾಗೂ ಇಲ್ಲಿ ನೈರ್ಮಲ್ಯ ಮತ್ತು ಸಮಾಧಿಯ ಪಾವಿತ್ರ್ಯತೆಯನ್ನು ಕಾಪಾಡುವ ಕೆಲಸವನ್ನು ಸರ್ಕಾರ ತುರ್ತಾಗಿ ಮಾಡಲಿ ಎಂದು ಆಗ್ರಹಿಸಿದ್ದಾರೆ.