ಶ್ರೀಕಾಕುಳಂ: ಆಂಧ್ರಪ್ರದೇಶದ ಶ್ರೀಕಾಕುಳಂ ವೆಂಕಟೇಶ್ವರ ದೇವಸ್ಥಾನದಲ್ಲಿ ಕಾಲ್ತುಳಿತ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
ಕಾರ್ತಿಕ ಮಾಸದ ಮೊದಲ ಏಕಾದಶಿ ಹಿನ್ನೆಲೆಯಲ್ಲಿ ಶ್ರೀಕಾಕುಳಂನ ಕಾಶಿಬಗ್ಗು ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ದೇವಸ್ಥಾನಕ್ಕೆ ಏಕಾಏಕಿ ಲಕ್ಷಾಂತರ ಭಕ್ತರು ಆಗಮಿಸಿದ್ದರು. ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿದ್ದರಿಂದ ನೂಕುನುಗ್ಗಲು ಉಂಟಾಗಿದೆ. ಈ ವೇಳೆ ಕಾಲ್ತುಳಿತ ಸಂಭವಿಸಿದೆ. ದುರಂತದಲ್ಲಿ ಈವರೆಗೆ 10 ಜನರು ಸಾವನ್ನಪ್ಪಿದ್ದಾರೆ. ಹಲವರು ತೀವ್ರ ಅಸ್ವಸ್ಥರಾಗಿದ್ದಾರೆ.
ಮೃತರಲ್ಲಿ 8 ಜನ ಮಹಿಳೆಯರು ಹಾಗೂ ಇಬ್ಬರು ಮಕ್ಕಳು ಸೇರಿದ್ದಾರೆ. ದೇವಸ್ಥಾನದ ಮೆಟ್ಟಿಲು ಹತ್ತುವಾಗ ಕಾಲ್ತುಳಿತ ಸಂಭವಿಸಿದ್ದು, ಮೆಟ್ಟಿಲಿಂದ ಕೆಲ ಮಹಿಳೆಯರು ಕೆಳಗೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ. ಕಾಶಿಬಗ್ಗು ವೆಂಕಟೇಶ್ವರ ದೇವಸ್ಥಾನ ನಿರ್ಮಾಣ ಹಂತದಲ್ಲಿದೆ. ಆದರೆ ಇಂದು ಕಾರ್ತಿಕ ಮಾಸದ ಮೊದಲ ಏಕಾದಶಿ ಹಿನ್ನೆಲೆಯಲ್ಲಿ ವಿಶೇಷ ಪೂಜಾ ಕೈಂಕರ್ಯ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೇ ದೇವಸ್ಥಾನ ಆಡಳಿತ ಮಂಡಳಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿತ್ತು. ಆಡಳಿತ ಮಂಡಳಿಯ ನಿರ್ಲಕ್ಷವೇ ದುರಂತಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ.
