ಇಸ್ತಾನ್‌ಬುಲ್‌ನಿಂದ ಸೈಪ್ರಸ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ಮಹಿಳೆಯೊಬ್ಬರು ಸಿಗರೇಟ್ ಸೇದಿ ಅವಾಂತರ ಸೃಷ್ಟಿಸಿದ್ದಾರೆ. ನೀಲಿ ಬಣ್ಣದ ಬುರ್ಖಾ ಮತ್ತು ಸನ್‌ಗ್ಲಾಸ್ ಧರಿಸಿದ್ದ ಆ ಮಹಿಳೆ, ವಿಮಾನದಲ್ಲಿ ಧೂಮಪಾನ ನಿಷೇಧಿಸಿದ್ದರೂ ಲೆಕ್ಕಿಸದೆ ಕಿಟಕಿಯ ಬಳಿ ಕುಳಿತು ಸಿಗರೇಟ್ ಸೇದಿದ್ದಾರೆ.
2019 ರಲ್ಲಿ ನಡೆದ ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳೆ ಮುಖ ಮುಚ್ಚಿಕೊಂಡು ಸಿಗರೇಟ್ ಸೇದುತ್ತಿದ್ದರೂ, ವಾಸನೆ ತಕ್ಷಣಕ್ಕೆ ಕ್ಯಾಬಿನ್ ಸಿಬ್ಬಂದಿಯ ಗಮನಕ್ಕೆ ಬಂದಿದೆ. ಅವರು ತಕ್ಷಣ ಕಾರ್ಯಪ್ರವೃತ್ತರಾದರು.
ಸಿಗರೇಟ್ ಹಚ್ಚಲು ಉಪಯೋಗಿಸುವ ಲೈಟರ್ ಕಿತ್ತುಕೊಳ್ಳಲು ಸಿಬ್ಬಂದಿ ಮುಂದಾದಾಗ, ಆಕೆ ಪ್ರತಿರೋಧ ತೋರಿ ಸೀಟ್ ಕವರ್‌ಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾಳೆ. ಕೂಡಲೇ ಎಚ್ಚೆತ್ತ ಸಿಬ್ಬಂದಿ ಲೈಟರ್ ಮೇಲೆ ನೀರು ಸುರಿದು ಬೆಂಕಿ ಹತ್ತುವುದನ್ನು ತಪ್ಪಿಸಿದ್ದಾರೆ.
ವಿಮಾನದಲ್ಲಿ ಧೂಮಪಾನ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸ್ಮೋಕ್ ಡಿಟೆಕ್ಟರ್‌ಗಳನ್ನು ತಿರುಚುವುದು, ಸಿಗರೇಟ್ ಹಚ್ಚುವುದು ಅಥವಾ ಒತ್ತಡದ ಕ್ಯಾಬಿನ್ ಒಳಗೆ ಬೆಂಕಿ ಹಚ್ಚುವುದು ಭಾರೀ ದಂಡ, ಬಂಧನ ಮತ್ತು ಜೀವಿತಾವಧಿಯ ಪ್ರಯಾಣ ನಿಷೇಧಕ್ಕೆ ಕಾರಣವಾಗಬಹುದು. ಈ ವಿಡಿಯೊ ವಿಮಾನದಲ್ಲಿನ ಬೇಜವಾಬ್ದಾರಿ ವರ್ತನೆಗಳ ವಿರುದ್ಧ ಎಚ್ಚರಿಕೆಯ ಗಂಟೆಯಾಗಿದೆ.