ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಹಾಲು, ಗ್ಯಾಸ್, ಪೆಟ್ರೋಲ್, ಡೀಸೆಲ್ ಸೇರಿದಂತೆ ವಿವಿಧ ಸರಕು ಮತ್ತು ಸೇವೆಗಳ ದರ ಏರಿಕೆ ಮಾಡಲಾಗಿದೆ. ಈ ನಡುವೆ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದೆ.
ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವ ಪೋಷಕರಿಗೆ ಏಕಾಏಕಿ ಸಾವಿರಾರು ರೂಪಾಯಿ ಶುಲ್ಕ ಹೆಚ್ಚಳ ಮಾಡಲಾಗಿದ್ದು, ಕೆಲವು ಖಾಸಗಿ ಶಾಲೆಗಳ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಹೊಸಹಳ್ಳಿ ಗ್ರಾಮದ ಎಂವಿಎಂ ಶಾಲೆಗೆ ಪೋಷಕರು ಮುತ್ತಿಗೆ ಹಾಕಿ ಆಡಳಿತ ಮಂಡಳಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಳೆದ ಬಾರಿಗಿಂತ ಈ ಬಾರಿ ಶಾಲಾ ಶುಲ್ಕವನ್ನು ಹೆಚ್ಚಳ ಮಾಡಿರುವುದೇ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಹಳೆಯ ಮಕ್ಕಳ ಶಾಲಾ ಶುಲ್ಕದ ಮೇಲೆ ಶೇಕಡ 50ರಷ್ಟು ಶುಲ್ಕ ಹೆಚ್ಚಳ ಮಾಡಲಾಗಿದೆ. ಏಕಾಏಕಿ 20 ರಿಂದ 25 ಸಾವಿರ ರೂಪಾಯಿವರೆಗೆ ಶುಲ್ಕ ಹೆಚ್ಚಳ ಮಾಡಿರುವುದನ್ನು ಖಂಡಿಸಿದ ಪೋಷಕರು ಶಾಲೆಯ ಆಡಳಿತ ಮಂಡಳಿಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಕೆಜಿಗೆ ಈ ಹಿಂದೆ 75,000 ರೂ. ತೆಗೆದುಕೊಂಡಿದ್ದ ಶಾಲೆಯ ಆಡಳಿತ ಮಂಡಳಿ ಮುಂದಿನ ಬಾರಿ ಶುಲ್ಕ ಹೆಚ್ಚಳ ಮಾಡುವುದಿಲ್ಲವೆಂದು ಹೇಳಿತ್ತು. ಆದರೆ 20,000 ರೂ. ಶುಲ್ಕ ಹೆಚ್ಚಳ ಮಾಡಿದೆ. ವ್ಯಾನ್ ಶುಲ್ಕವನ್ನು ಕೂಡ ಹೆಚ್ಚಳ ಮಾಡಲಾಗಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಹಲವು ಶಾಲೆಗಳಲ್ಲಿ ಶುಲ್ಕ ಹೆಚ್ಚಳ ಮಾಡಿರುವುದು ಪೋಷಕರಿಗೆ ಹೊರೆಯಾಗಿ ಪರಿಣಮಿಸಿದೆ.