ಮೈಸೂರು: ಮೊದಲ ಮಗು ವಿಶೇಷ ಚೇತನಳಾಗಿದ್ದು, ಎರಡನೇ ಮಗು ಕೂಡ ಹೆಣ್ಣಾಗಿರುವ ಹಿನ್ನೆಲೆಯಲ್ಲಿ ಮಾನಸಿಕವಾಗಿ ಖಿನ್ನತೆಗೆ ಒಳಗಾದ ತಾಯಿ ಚಾಕುವಿನಿಂದ ಇಬ್ಬರೂ ಮಕ್ಕಳ ಕತ್ತು ಕೊಯ್ದು, ತಾನೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ಘಟನೆ ನಡೆದಿದೆ. ಸುಣ್ಣದ ಬೀದಿಯ ನಿವಾಸಿ ಜಮೈದ್ ಶರೀಫ್ ಅವರ ಪುತ್ರಿ ಅರ್ಬಿಯಾ ಬಾನು(25) ತನ್ನ ಇಬ್ಬರು ಮಕ್ಕಳಾದ ಆನಂ ಫಾತಿಮಾ(2) ಮತ್ತು 10 ದಿನದ ನವಜಾತ ಶಿಶುವನ್ನು ಸಾಯಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅರೇನಹಳ್ಳಿಯ ಸೈಯದ್ ಮುಸಾವೀರ್ ಜೊತೆಗೆ ಅರ್ಬಿಯಾ ಮದುವೆ ಮಾಡಿಕೊಡಲಾಗಿತ್ತು. ಶನಿವಾರ ಬೆಳಗ್ಗೆ ಬೆಟ್ಟದಪುರದ ತನ್ನ ತಾಯಿ ಮನೆಯಲ್ಲಿ ಅರ್ಬಿಯಾ ಬಾನು ಮಕ್ಕಳೊಂದಿಗೆ ರೂಂಗೆ ಹೋಗಿ ಬಾಗಿಲು ಲಾಕ್ ಮಾಡಿಕೊಂಡಿದ್ದಾಳೆ. ಆಕೆ ಮಲಗಿರಬಹುದು ಎಂದು ಮನೆಯವರು ಬಹಳ ಹೊತ್ತಿನವರೆಗೂ ರೂಮಿನ ಕಡೆ ಹೋಗಿಲ್ಲ. ನಂತರ ಎಷ್ಟೇ ಕರೆದರೂ ಬಾಗಿಲು ತೆಗೆದಿಲ್ಲ. ಬಾಗಿಲು ಒಡೆದು ನೋಡಿದಾಗ ಇಬ್ಬರು ಮಕ್ಕಳು ಮಂಚದ ಮೇಲೆ, ಅರ್ಬಿಯಾ ಕೆಳಗೆ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಬೆಟ್ಟದಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
