ದುನಿಯಾ ಡಿಜಿಟಲ್ ಡೆಸ್ಕ್ : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು, ಪ್ರತ್ಯೇಕ ಘಟನೆಯಲ್ಲಿ ಒಂದೇ ದಿನ ಇಬ್ಬರು ಮಕ್ಕಳು ತನ್ನ ತಾಯಂದಿರನ್ನ ಹತ್ಯೆಗೈದಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿ ಒಂದು ಮರ್ಡರ್ ನಡೆದಿದ್ರೆ, ಬಾಗಲಕೋಟೆಯಲ್ಲಿ ಮತ್ತೊಂದು ಮರ್ಡರ್ ನಡೆದಿದೆ.
ಬೆಂಗಳೂರಲ್ಲಿ ತಾಯಿಯ ಕೊಲೆ
ಬೆಂಗಳೂರು : ಪಾಪಿ ಮಗನೋರ್ವ ಹೆತ್ತ ತಾಯಿ ಕತ್ತು ಸೀಳಿ ಕೊಲೆ ಮಾಡಿದ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಜಾಲಮಂಗಲದಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ಸರೋಜಮ್ಮ (60) ಎಂದು ಗುರುತಿಸಲಾಗಿದೆ. ಅನಿಲ್ (36) ತಾಯಿಯನ್ನೇ ಕೊಂದ ಪಾಪಿ ಮಗ. ಆಗಾಗ ತಾಯಿ ಹಾಗೂ ಮಗನ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಜಮೀನು ಮಾರಾಟ ಮಾಡಲು ಅಡ್ವಾನ್ಸ್ ಪಡೆದಿದ್ದ ಹಣವನ್ನು ಕೊಡುವಂತೆ ಮಗ ತಾಯಿ ಬಳಿ ಕೇಳಿದ್ದಾನೆ. ಆದರೆ ಸರೋಜಮ್ಮ ಹಣ ನೀಡಲಿಲ್ಲ. ಇದರಿಂದ ಇಬ್ಬರ ನಡುವೆ ಜಗಳ ನಡೆದಿದೆ . ಗುರುವಾರ ಸಂಜೆ ಸರೋಜಮ್ಮನನ್ನು ಕೆಳಗೆ ಬೀಳಿಸಿದ ಅನಿಲ್ ಚಾಕು ತೆಗೆದುಕೊಂಡು ಆಕೆಯ ಕತ್ತು ಕೊಯ್ದಿದ್ದಾನೆ. ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದ ಸರೋಜಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆಯಲ್ಲಿ ಮತ್ತೊಂದು ಮರ್ಡರ್.!
ಬಾಗಲಕೋಟೆ: ಮದ್ಯ ಸೇವನೆಗೆ ಹಣ ಕೊಡದ ಕಾರಣಕ್ಕೆ ಹೆತ್ತ ತಾಯಿಯನ್ನೇ ಕೈಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಕತ್ತು ಕೊಯ್ದು ಕೊಲೆ ಮಾಡಿದ ಘಟನೆ ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದಲ್ಲಿ ನಡೆದಿದೆ.
28 ವರ್ಷದ ವೆಂಕಟೇಶ್ ಗಿರಿಸಾಗರ ಎಂಬಾತ ತನ್ನ 58 ವರ್ಷದ ತಾಯಿ ಶಾವಕ್ಕ ಗಿರಿಸಾಗರ ಅವರ ಕೈಕಾಲು ಕಟ್ಟಿ ಬಾಯಲ್ಲಿ ಬಟ್ಟೆ ತುರುಕಿ, ಕುತ್ತಿಗೆ ಕೊಯ್ದು ಕೊಲೆ ಮಾಡಿ ಬಳಿಕ ಪರಾರಿಯಾಗಿದ್ದಾನೆ. ಶಾವಕ್ಕ ಮನೆಯಲ್ಲಿ ನರಳಾಡಿ ಪ್ರಾಣ ಬಿಟ್ಟಿದ್ದಾರೆ.
ಶಾವಕ್ಕ ಅವರ ಪತಿ ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಮಗಳನ್ನು ಮದುವೆ ಮಾಡಿ ಬೇರೆ ಊರಿಗೆ ಕೊಡಲಾಗಿತ್ತು. ಬಾಡಿಗೆ ಮನೆಯಲ್ಲಿ ವೆಂಕಟೇಶ್ ಮತ್ತು ಶಾವಕ್ಕ ವಾಸವಾಗಿದ್ದರು. ಯಾವುದೇ ಕೆಲಸ ಮಾಡದೆ ಕುಡಿತದ ಚಟ ರೂಢಿಸಿಕೊಂಡಿದ್ದ ವೆಂಕಟೇಶ್ ತಾಯಿ ಕೂಲಿ ಮಾಡಿದ ಹಣವನ್ನು ಪಡೆದು ದಿನ ಕುಡಿದು ಬಂದು ಜಗಳವಾಡುತ್ತಿದ್ದ.
ಗುರುವಾರ ಕೂಡ ಹಣಕ್ಕಾಗಿ ಪೀಡಿಸಿದ್ದು, ಹಣಕೊಡಲು ನಿರಾಕರಿಸಿದಾಗ ಕೈಕಾಲು ಕಟ್ಟಿ ಬಾಯಲ್ಲಿ ಬಟ್ಟೆ ತುರುಕಿ, ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಸಂಜೆಯಾದರೂ ಶಾವಕ್ಕ ಕಾಣಿಸದಿದ್ದಾಗ ಅಕ್ಕಪಕ್ಕದವರು ಇಣುಕಿ ನೋಡಿದ್ದಾರೆ. ರಕ್ತದ ಮಡುವಿನಲ್ಲಿ ಶವವಾಗಿ ಬಿದ್ದಿರುವುದು ಗೊತ್ತಾಗಿದೆ. ಕೂಡಲೇ ಕಲಾದಗಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ತಾಯಿಯನ್ನು ಕೊಂದು ಗದ್ದನಕೇರಿ ಕ್ರಾಸ್ ನ ಬಾರ್ ನಲ್ಲಿ ಕುಡಿಯುತ್ತ ಕುಳಿತಿದ್ದ ವೆಂಕಟೇಶನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.