ತಮಿಳುನಾಡು : ಆಘಾತಕಾರಿ ಘಟನೆಯೊಂದರಲ್ಲಿ 8ನೇ ತರಗತಿ ವಿದ್ಯಾರ್ಥಿಯೊಬ್ಬನ ಮೇಲೆ ಆತನ ಸ್ನೇಹಿತ ತನ್ನ ಶಾಲಾ ಚೀಲದಲ್ಲಿ ಅಡಗಿಸಿಟ್ಟಿದ್ದ ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಕೆಲವು ತಿಂಗಳ ಹಿಂದೆ ಪೆನ್ಸಿಲ್ ಹಂಚಿಕೊಳ್ಳುವ ವಿಚಾರವಾಗಿ ನಡೆದ ಜಗಳದಿಂದ ಈ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿಗೆ ಎರಡರಿಂದ ಮೂರು ಕಡೆ ಕತ್ತರಿಸಿದ ಗಾಯಗಳಾಗಿದ್ದು ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ. ಮಧ್ಯಪ್ರವೇಶಿಸಲು ಪ್ರಯತ್ನಿಸಿದ ಶಿಕ್ಷಕನಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಬ್ಬರು ಹುಡುಗರು ಕೆಲವು ತಿಂಗಳ ಹಿಂದೆ ಪೆನ್ಸಿಲ್ ಹಂಚಿಕೊಳ್ಳುವ ಬಗ್ಗೆ ಜಗಳವಾಡಿದ್ದರು ಮತ್ತು ಅಂದಿನಿಂದ ಮಾತನಾಡುತ್ತಿಲ್ಲಲಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಂಗಳವಾರ, ದಾಳಿಕೋರನು ತನ್ನ ಶಾಲಾ ಚೀಲದೊಳಗೆ ಅಡಗಿಸಿಟ್ಟಿದ್ದ ಆಯುಧವನ್ನು ತಂದು ಇನ್ನೊಬ್ಬ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಕಾನೂನು ಪ್ರಕಾರ ದಾಳಿಕೋರನನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿ ಹೇಳಿದರು.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ತಮಿಳುನಾಡು ಬಿಜೆಪಿ ಮುಖ್ಯಸ್ಥ ನೈನಾರ್ ನಾಗೇಂದ್ರನ್, ದಾಳಿಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಬಾಲಕ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ. ಕೊಲೆಗಳು, ದರೋಡೆಗಳು, ಲೈಂಗಿಕ ಅಪರಾಧಗಳು ಮತ್ತು ಜಾತಿ ಆಧಾರಿತ ದಾಳಿಗಳು ಹೆಚ್ಚಾಗಲು ಮತ್ತು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ “ಅವ್ಯವಸ್ಥೆಯ ಆಡಳಿತ” ಕಾರಣ ಎಂದು ಅವರು ಆರೋಪಿಸಿದರು.