ನವದೆಹಲಿ: ದೇಶದಲ್ಲಿ ಫಲವತ್ತತೆ ದರ ಇದೇ ಮೊದಲ ಬಾರಿಗೆ 1.9ಕ್ಕೆ ಕುಸಿದಿದೆ ಎಂದು ಸರ್ಕಾರ ಬಿಡುಗಡೆ ಮಾಡಿದ ವರದಿಯಿಂದ ತಿಳಿದು ಬಂದಿದೆ.
ಅಲ್ಲದೆ ಇದೇ ಮೊದಲ ಬಾರಿಗೆ ಗ್ರಾಮೀಣ ಪ್ರದೇಶದಲ್ಲಿ ಫಲವತ್ತತೆ ದರ 2.1ಕ್ಕೆ ಕುಸಿತವಾಗಿದೆ. ಪ್ರತಿ ಮಹಿಳೆ ಇಬ್ಬರು ಮಕ್ಕಳನ್ನು ಹೊಂದುವುದು ಜನಸಂಖ್ಯೆ ಸಮಸ್ಥಿತಿಯಲ್ಲಿಡಲು ಅವಶ್ಯಕ. ಆದರೆ ಫಲವತ್ತತೆ ದರ ದೇಶದಲ್ಲಿ ಮೊದಲ ಬಾರಿಗೆ ಎರಡಕ್ಕಿಂತ ಕಡಿಮೆಯಾಗಿ 1.9ಕ್ಕೆ ಕುಸಿದಿರುವುದು ಕಳವಳಕಾರಿಯಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಫಲವತ್ತತೆ ಪ್ರಮಾಣ ಗ್ರಾಮೀಣ ಪ್ರದೇಶದಲ್ಲಿ 2.1 ರಷ್ಟು ಇದೆಯಾದರೂ ಈ ಮೊದಲು ಇದ್ದುದ್ದಕ್ಕಿಂತ ಕಡಿಮೆಯಾಗಿದೆ, ನಗರಗಳಲ್ಲಿ ಫಲವತ್ತತೆ ದರ ಭಾರಿ ಕುಸಿತವಾಗಿದ್ದು 1.5ಕ್ಕೆ ತಲುಪಿದೆ. ಮುಂದಿನ ದಿನಗಳಲ್ಲಿ ಗ್ರಾಮಗಳಲ್ಲಿಯೂ ಈ ಪ್ರಮಾಣ ಕಡಿಮೆಯಾದಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ. ಜನನ ಪ್ರಮಾಣ ಕುಸಿತದ ನಡುವೆ ದೇಶದಲ್ಲಿ 14 ವರ್ಷದವರೆಗಿನ ಮಕ್ಕಳ ಸಂಖ್ಯೆಯಲ್ಲಿಯೂ ಇಳಿಕೆಯಾಗುತ್ತಿದೆ. 1991 ರಲ್ಲಿ ಶೇಕಡ 36.3ರಷ್ಟು ಇದ್ದ 0- 14 ವರ್ಷ ವಯಸ್ಸಿನ ಮಕ್ಕಳ ಪ್ರಮಾಣ 2023ರ ವೇಳೆಗೆ ಶೇಕಡ 24.2ಕ್ಕೆ ಇಳಿದಿದೆ. ಹೆಣ್ಣು ಮಕ್ಕಳ ಸಂಖ್ಯೆಗೆ ಹೋಲಿಸಿದರೆ ಗಂಡು ಮಕ್ಕಳ ಸಂಖ್ಯೆ ಅಧಿಕವಿದೆ. 15 ರಿಂದ 59 ವರ್ಷದ ಒಳಗಿನವರು ಅಂದರೆ ದುಡಿಯುವ ವರ್ಗದ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ.