ಬಂಗಾರಪೇಟೆ: ನಿರ್ಜನ ಪ್ರದೇಶಕ್ಕೆ ಯುವತಿ ಕರೆದೊಯ್ದು ಆಟೋ ಚಾಲಕ ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿದೆ. ಪ್ರಕರಣದ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಜಾರ್ಖಂಡ್ ಮೂಲದ ಯುವತಿಯ ಮೇಲೆ ಮರಗಲ್ ನಿವಾಸಿ ಮಹೇಶ(24) ಅತ್ಯಾಚಾರ ಆರೋಪ ಕೇಳಿ ಬಂದಿದೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಯುವತಿ ಶುಕ್ರವಾರ ಸಂಜೆ ನರಸಾಪುರದಿಂದ ಬಂಗಾರಪೇಟೆಗೆ ಕಂಪನಿ ಬಸ್ ನಲ್ಲಿ ಆಗಮಿಸಿದ್ದಾರೆ. ಅಲ್ಲಿಂದ ಮನೆಗೆ ತೆರಳುವಾಗ ಮಳೆ ಬರುತ್ತಿದ್ದ ಕಾರಣ ಆಟೋ ಹತ್ತಿದ್ದಾರೆ. ಚಾಲಕ ಮಹೇಶ ಯುವತಿಯ ಮನೆಯ ಕಡೆಗೆ ಹೋಗುವ ರಸ್ತೆ ಬದಲಿಸಿದ್ದಾನೆ. ಬೇರೆ ಮಾರ್ಗದಲ್ಲಿ ಹೋಗಿದ್ದಾನೆ. ಈ ವೇಳೆ ಯುವತಿ ಪ್ರಶ್ನಿಸಿದಾಗ ಈ ದಾರಿಯಲ್ಲಿಯೂ ಮನೆಗೆ ಹೋಗಬಹುದು ಎಂದು ಸುಳ್ಳು ಹೇಳಿದ್ದಾನೆ.
ಪಟ್ಟಣದಿಂದ ಎರಡರಿಂದ ಮೂರು ಕಿಲೋಮೀಟರ್ ದೂರದ ನಿರ್ಜನ ಪ್ರದೇಶದಲ್ಲಿ ಆಟೋ ನಿಲ್ಲಿಸಿ ಅತ್ಯಾಚಾರ ಎಸಗಿ ಅಲ್ಲೇ ಯುವತಿ ಬಿಟ್ಟು ಪರಾರಿಯಾಗಿದ್ದಾನೆ. ಯುವತಿಯ ಮೈಯೆಲ್ಲಾ ಕೆಸರಾಗಿ ತೀವ್ರ ಅಸ್ವಸ್ಥಳಾಗಿ ನಡೆದುಕೊಂಡು ಬಂದಿದ್ದಾಳೆ. ಎದುರಾದ ಸ್ಥಳೀಯರಿಗೆ ಮಾಹಿತಿ ನೀಡಿದ್ದಾಳೆ. ವಿಷಯ ತಿಳಿದು ಸ್ಥಳಕ್ಕೆ ಬಂದು ಪೊಲೀಸರು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆಯಿಂದ ಮಾಹಿತಿ ಪಡೆದುಕೊಂಡು ಪ್ರಕರಣ ದಾಖಲಿಸಿ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.