ಚಿತ್ರದುರ್ಗ: ಟ್ರಾಫಿಕ್ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಆಟೋ ಚಾಲಕ ನಡು ರಸ್ತೆಯಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಚಿತ್ರದುರ್ಗ ತಾಲೂಕಿನ ಮಾಳವಟ್ಟಿ ಗ್ರಾಮದ ತಿಪ್ಪೇಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದವರು. ಚಿತ್ರದುರ್ಗದ ಗಾಂಧಿ ಸರ್ಕಲ್ ನಲ್ಲಿ ರಸ್ತೆಯಲ್ಲಿಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪೊಲೀಸರು ಆಟೋ ತಡೆದು ಕಿರುಕುಳ ನೀಡಿ ಲಂಚ ಕೇಳಿದ್ದಕ್ಕೆ ಈ ರೀತಿ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ತೀವ್ರ ಸುಟ್ಟ ಗಾಯಗಳಾಗಿರುವ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಕುಡಿದು ಆಟೋ ಚಾಲನೆ, ಸಮವಸ್ತ್ರ ಇಲ್ಲದಿರುವುದು, ನಿಯಮ ಉಲ್ಲಂಘನೆ ಬಗ್ಗೆ ಸಂಚಾರ ಪೊಲೀಸರು ಪ್ರಶ್ನಿಸಿದ್ದರು. ಈ ಬಗ್ಗೆ ಆಕ್ಷೇಪಿಸಿದ್ದ ತಿಪ್ಪೇಸ್ವಾಮಿ ವಿಡಿಯೋ ಮಾಡಿದ್ದರು. ಇದು ವಿಕೋಪಕ್ಕೆ ತಿರುಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
