ಕೊಪ್ಪಳ: ಮಹಿಳೆಗೆ ಮದ್ಯ ಕುಡಿಸಿ ನಾಲ್ವರಿಂದ ಅತ್ಯಾಚಾರ ನಡೆದ ಆರೋಪ ಕೇಳಿ ಬಂದಿದೆ. ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಮದ್ಲೂರು ಗ್ರಾಮದ ಬಳಿ ಪೈಶಾಚಿಕ ಕೃತ್ಯ ನಡೆದಿದೆ.
39 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿದೆ. ಮಹಿಳೆಯನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಕೊಪ್ಪಳ ಡಿವೈಎಸ್ಪಿ ಮುತ್ತಣ್ಣ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪರಿಚಯದವರಿಂದ ಹಣ ಪಡೆಯಲು ಹೊಸಪೇಟೆಯಿಂದ ಕುಷ್ಟಗಿ ಪಟ್ಟಣಕ್ಕೆ ಬಂದಿದ್ದ ಮಹಿಳೆಯನ್ನು ಸಂಜೆ ಬೈಕ್ ಮೇಲೆ ಕರೆದುಕೊಂಡು ಹೋಗಿದ್ದಾರೆ. ಮದ್ಯ ಕುಡಿಸಿ ರೇಪ್ ಮಾಡಿರುವುದಾಗಿ ಮಹಿಳೆ ಆರೋಪಿಸಿದ್ದಾರೆ. ಘಟನೆ ಬಗ್ಗೆ ನನಗೇನು ಗೊತ್ತಿಲ್ಲ ಎಂದು ಮಹಿಳೆಯ ಪತಿ ಹೇಳಿದ್ದು, ಅಪಘಾತವಾಗಿದೆ ಎಂದು ನನ್ನನ್ನು ಕರೆಸಿದ್ದಾರೆ ಎಂದು ತಿಳಿಸಿದ್ದಾರೆ. ಸಂತ್ರಸ್ತ ಮಹಿಳೆ ಹೋಂ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
