ಮಹಾರಾಷ್ಟ್ರದ ಭಿವಂಡಿಯ ದೇವನಗರದಲ್ಲಿ ಬುಧವಾರ ನಡೆದ ಅಹಿತಕರ ಘಟನೆಯೊಂದು ಇಡೀ ಪ್ರದೇಶವನ್ನೇ ಬೆಚ್ಚಿಬೀಳಿಸಿದೆ. ಎರಡು ಕುಟುಂಬಗಳ ನಡುವಿನ ಸಣ್ಣ ವಿಷಯವೊಂದು ವಿಕೋಪಕ್ಕೆ ತಿರುಗಿ, ಮನೆಯ ಮೇಲ್ಛಾವಣಿಯೇ ಕುಸಿದು ಬಿದ್ದಿದೆ. ಈ ಘಟನೆಯಲ್ಲಿ ನಾಲ್ವರು ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡ ಸದೃಶ್ಯವಾಗಿ ಪಾರಾಗಿದ್ದಾರೆ.
ಮೂಲಗಳ ಪ್ರಕಾರ, ಮೋಯಿನುದ್ದೀನ್ ನಸರುದ್ದೀನ್ ಶೇಖ್ ಮತ್ತು ನೂರುದ್ದೀನ್ ಇಮಾಮುದ್ದೀನ್ ಶೇಖ್ ಎಂಬುವವರ ಕುಟುಂಬಗಳ ನಡುವೆ ಮೊಬೈಲ್ ಫೋನ್ ವಿಚಾರವಾಗಿ ವಾಗ್ವಾದ ನಡೆದಿತ್ತು. ಈ ವಾಗ್ವಾದ ತಾರಕಕ್ಕೇರಿದಾಗ ಎರಡೂ ಕಡೆಯಿಂದ ಸುಮಾರು ಎಂಟು ಹತ್ತು ಮಂದಿ ಮಹಿಳೆಯರು ಮತ್ತು ಪುರುಷರು ಪಕ್ಕದ ಮನೆಯ ಮೇಲ್ಛಾವಣಿಗೆ ಏರಿ ಪರಸ್ಪರ ತಳ್ಳಾಟ ಮತ್ತು ಹೊಡೆದಾಟದಲ್ಲಿ ತೊಡಗಿದ್ದರು.
ಈ ಗದ್ದಲದ ನಡುವೆ, ಅತಿಯಾದ ತೂಕವನ್ನು ತಡೆದುಕೊಳ್ಳಲಾಗದೆ ಆ ಮನೆಯ ಮೇಲ್ಛಾವಣಿಯು ದಿಢೀರ್ ಎಂದು ಕುಸಿದು ಬಿದ್ದಿದೆ. ಕನಿಷ್ಠ ಆರು ಮಂದಿ ಕುಸಿಯುತ್ತಿರುವ ಛಾವಣಿಯೊಂದಿಗೆ ಕೆಳಗೆ ಬಿದ್ದರೂ, ಅದೃಷ್ಟವಶಾತ್ ಯಾರಿಗೂ ಗಂಭೀರವಾದ ಗಾಯಗಳಾಗಿಲ್ಲ. ಈ ರೋಚಕ ಮತ್ತು ಭಯಾನಕ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಘಟನೆಯ ಗಂಭೀರತೆಯನ್ನು ಅರಿತ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಣ್ಣ ಕಾರಣಕ್ಕೆ ನಡೆದ ಈ ಗಲಾಟೆಯು ದೊಡ್ಡ ಅನಾಹುತಕ್ಕೆ ಕಾರಣವಾಗಿದ್ದು, ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ.
#Maharashtra #viralVideo
— Mayuresh Ganapatye (@mayuganapatye) April 4, 2025
Shocking incident in Bhiwandi! A fight between two families on a rooftop turned disastrous as the floor collapsed, causing several people to fall. All sustained serious injuries. Police are investigating. #Bhiwandi #Accident #ViralVideo pic.twitter.com/U9J41wAw69