ಬೆಂಗಳೂರು: ರಾಜ್ಯದಲ್ಲಿ ಕಳೆದ ಐದೂವರೆ ವರ್ಷದಲ್ಲಿ 82 ಹುಲಿಗಳು ಸಾವನ್ನಪ್ಪಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿರುವ ಕುರಿತಂತೆ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಆಘಾತ ವ್ಯಕ್ತಪಡಿಸಿದ್ದಾರೆ.
ಸಾವನ್ನಪ್ಪಿರುವ ಎಲ್ಲಾ ಹುಲಿಗಳ ಸಾವಿನ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ. ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಈ ಕುರಿತಾಗಿ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದು, ಸಾವನ್ನಪ್ಪಿರುವ 82 ಹುಲಿಗಳ ಪೈಕಿ ಎಷ್ಟು ಹುಲಿಗಳು ಸಹಜವಾಗಿ ಸಾವು ಕಂಡಿವೆ? ಎಷ್ಟು ಹುಲಿಗಳು ಅಸಹಜವಾಗಿ ಮೃತಪಟ್ಟಿವೆ? ಅಸಹಜವಾಗಿ ಮೃತಪಟ್ಟ ಹುಲಿಗಳ ಸಾವಿಗೆ ಕಾರಣವೇನು ಎನ್ನುವ ಬಗ್ಗೆ ತನಿಖೆ ನಡೆದು ವರದಿ ಬಂದಿದೆಯೇ ಎಂದು ಪ್ರಶ್ನಿಸಿದ್ದಾರೆ.
ಮೃತಪಟ್ಟ ಹುಲಿಗಳಲ್ಲಿ ಯಾವುದಾದರೂ ಅಂಗಾಂಗ ಅಂದರೆ ಉಗುರು, ಹಲ್ಲು ಇತ್ಯಾದಿ ತೆಗೆಯಲಾಗಿದೆಯೇ? ಹುಲಿಗಳ ಹತ್ಯೆ ಆಗಿದ್ದಲ್ಲಿ ನಿರ್ಲಕ್ಷ್ಯ ತೋರಿದ ಸಿಬ್ಬಂದಿ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆಯೇ? ಆರೋಪಿಗಳನ್ನು ಬಂಧಿಸಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.
ಇದುವರೆಗೆ ಹುಲಿ ಹತ್ಯೆ ಪ್ರಕರಣಗಳಲ್ಲಿ ಎಷ್ಟು ಜನರಿಗೆ ಶಿಕ್ಷೆಯಾಗಿದೆ? ಎಷ್ಟು ಪ್ರಕರಣಗಳು ತನಿಖೆ ಹಂತದಲ್ಲಿವೆ? ಯಾವ ಕಾರಣಕ್ಕೆ ತನಿಖೆ ವಿಳಂಬವಾಗಿದೆ ಎನ್ನುವ ಸಂಪೂರ್ಣ ವಿವರವನ್ನು 10 ದಿನದೊಳಗೆ ಸಲ್ಲಿಸುವಂತೆ ಸೂಚಿಸಿದ್ದಾರೆ.