ಗಜೇಂದ್ರಗಢ: ಬೀದಿ ನಾಯಿಗಳ ದಾಳಿಗೆ ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ ಕೆಲಕಾಲ ರಾಷ್ಟ್ರೀಯ ಹೆದ್ದಾರಿ ತಡೆದು ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಭಾನುವಾರ ಗದಗ ಜಿಲ್ಲೆಯ ಗಜೇಂದ್ರಗಢ ಪಟ್ಟಣದ ಸರ್ಕಾರಿ ಸಮುದಾಯ ಕೇಂದ್ರದ ಎದುರು ಘಟನೆ ನಡೆದಿದೆ.
ಚೋಳಿನವರ ಬಡಾವಣೆ ನಿವಾಸಿ ಪ್ರೇಮಾ(52) ಮೃತಪಟ್ಟವರು. ಭಾನುವಾರ ಬೆಳಿಗ್ಗೆ ಹೂವು ತರಲು ಹೋಗುವಾಗ ಪ್ರೇಮಾ ಅವರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಇದರಿಂದ ಅವರ ಕೈ ಕಾಲಿಗೆ ಗಾಯಗಳಾಗಿದ್ದು, ಭಯಗೊಂಡ ಅವರು ಓಡುವಾಗ ಆಯತಪ್ಪಿ ಚರಂಡಿಯಲ್ಲಿ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದರಿಂದ ಆಕ್ರೋಶಗೊಂಡ ಸಂಬಂಧಿಕರು, ಸ್ಥಳೀಯರು ಕೆಲ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.