ಚಿಕ್ಕಮಗಳೂರು : ಚಿಕ್ಕಮಗಳೂರಿನಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, ನದಿಗೆ ಬಿದ್ದು ಮೃತಪಟ್ಟ ಮಗನ ಮೃತದೇಹ ಸಿಗುವ ಮುನ್ನವೇ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೌದು, ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕೊಳಮಾಗೆ ಗ್ರಾಮದಲ್ಲಿ ಘಟನೆ ನಡೆದಿದೆ.ಮೃತ ಮಹಿಳೆಯನ್ನು ರವಿಕಲಾ (48) ಎಂದು ಗುರುತಿಸಲಾಗಿದೆ.
ಏನಿದು ಘಟನೆ
ನಿನ್ನೆ ಗುರುವಾರ ಸಂಜೆ ರವಿಕಲಾ ಪುತ್ರ ಶಮಂತ್ (23) ಪಿಕಪ್ ಓಡಿಸುವಾಗ ನಿಯಂತ್ರಣ ತಪ್ಪಿ ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದು ಪಿಕಪ್ ಸಮೇತ ನದಿಗೆ ಬಿದ್ದಿದ್ದನು. ಶಮಂತ್ ಪಿಕಪ್ ನಲ್ಲಿ ಕಾಫಿ ತೋಟಕ್ಕೆ ಕಾರ್ಮಿಕರನ್ನು ಕರೆದೊಯ್ಯತ್ತಿದ್ದನು. ಕಾರ್ಮಿಕರನ್ನು ತೋಟಕ್ಕೆ ಬಿಟ್ಟು ವಾಪಸ್ ಬರುವಾಗ ಈ ಅವಘಡ ಸಂಭವಿಸಿದೆ. ಮಳೆಗಾಲವಾದ್ದರಿಂದ ಭದ್ರಾ ನದಿ ಉಕ್ಕಿ ಹರಿಯುತ್ತಿದೆ.ಶಮಂತ್ ಮೃತದೇಹಕ್ಕೆ ಹುಡುಕಾಟ ನಡೆಯುತ್ತಿರುವಾಗಲೇ ಮಗನ ಸಾವಿನಿಂದ ಮನನೊಂದು ಕೆರೆಗೆ ಹಾರಿ ತಾಯಿ ರವಿಕಲಾ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.