ಗೇಟೆಡ್ ರೆಸಿಡೆನ್ಶಿಯಲ್ ಸೊಸೈಟಿಗಳಲ್ಲಿ ವಾಸಿಸುವ ಜನರು ತಮ್ಮ ನಿರ್ವಹಣಾ ಮೊತ್ತದ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನ್ವಯವಾಗುತ್ತದೆಯೇ ಎಂಬ ಗೊಂದಲದಲ್ಲಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ತಪ್ಪು ಮಾಹಿತಿಯಿಂದ ಈ ಗೊಂದಲ ಹೆಚ್ಚಾಗಿದೆ. ಇದೀಗ ತೆರಿಗೆ ಅಧಿಕಾರಿಗಳು ನಿರ್ವಹಣಾ ಮೊತ್ತದ ಮೇಲಿನ ತೆರಿಗೆ ಹೊಸತಲ್ಲ ಮತ್ತು 2019 ರಿಂದ ಜಾರಿಯಲ್ಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಯಾವಾಗ ಜಿಎಸ್‌ಟಿ ಅನ್ವಯವಾಗುತ್ತದೆ ?
ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಪ್ರಕಾರ, ಪ್ರತಿ ಫ್ಲ್ಯಾಟ್‌ಗೆ ಮಾಸಿಕ ನಿರ್ವಹಣಾ ಕೊಡುಗೆ ₹ 7,500 ಮೀರಿದರೆ ಮತ್ತು ಸೊಸೈಟಿಯ ವಾರ್ಷಿಕ ವಹಿವಾಟು ₹ 20 ಲಕ್ಷಕ್ಕಿಂತ ಹೆಚ್ಚಿದ್ದರೆ, ವಸತಿ ಸಂಘಗಳು ಸಂಪೂರ್ಣ ಮಾಸಿಕ ನಿರ್ವಹಣಾ ಮೊತ್ತದ ಮೇಲೆ ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಈ ಯಾವುದೇ ಷರತ್ತುಗಳನ್ನು ಪೂರೈಸದಿದ್ದರೆ, ಸೊಸೈಟಿಯು ಜಿಎಸ್‌ಟಿ ಪಾವತಿಸುವುದರಿಂದ ವಿನಾಯಿತಿ ಪಡೆಯುತ್ತದೆ ಮತ್ತು ಜಿಎಸ್‌ಟಿ ಕಾಯ್ದೆಯ ಅಡಿಯಲ್ಲಿ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ.
ಸಿಬಿಐಸಿ ಹೇಳಿಕೆ
“ಪ್ರತಿ ಸದಸ್ಯರಿಗೆ ಮಾಸಿಕ ನಿರ್ವಹಣೆ ₹ 7,500 ಮೀರಿದರೆ ಮತ್ತು ಸೊಸೈಟಿಯ ಒಟ್ಟು ವಹಿವಾಟು ₹ 20 ಲಕ್ಷಕ್ಕಿಂತ ಹೆಚ್ಚಿದ್ದರೆ, ವಿನಾಯಿತಿ ಮಿತಿಗಿಂತ ಹೆಚ್ಚಿನ ಮೊತ್ತಕ್ಕೆ ಮಾತ್ರವಲ್ಲದೆ ಪೂರ್ಣ ಮೊತ್ತದ ಮೇಲೆ ಜಿಎಸ್‌ಟಿ ವಿಧಿಸಲಾಗುತ್ತದೆ” ಎಂದು ಸಿಬಿಐಸಿ ಹೇಳಿಕೆಯಲ್ಲಿ ತಿಳಿಸಿದೆ. ಇದರರ್ಥ ನಿಮ್ಮ ಮಾಸಿಕ ಫ್ಲ್ಯಾಟ್ ನಿರ್ವಹಣಾ ಮೊತ್ತ ₹ 8,000 ಆಗಿದ್ದರೆ, ವಿನಾಯಿತಿ ಮಿತಿಗಿಂತ ಹೆಚ್ಚಿನ ₹ 500 ಕ್ಕೆ ಮಾತ್ರವಲ್ಲದೆ ಪೂರ್ಣ ಮೊತ್ತದ ಮೇಲೆ ತೆರಿಗೆ ವಿಧಿಸಲಾಗುತ್ತದೆ.
ರಾಜ್ಯದಿಂದ ರಾಜ್ಯಕ್ಕೆ ನಿಯಮಗಳು ಬದಲಾಗಬಹುದು
ನಿರ್ವಹಣಾ ಶುಲ್ಕಗಳ ಮೇಲಿನ ಜಿಎಸ್‌ಟಿ ನಿಯಮಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗಬಹುದು. ಉದಾಹರಣೆಗೆ, ಮದ್ರಾಸ್ ಹೈಕೋರ್ಟ್ 2021 ರಲ್ಲಿ ₹ 7,500 ಮಿತಿಗಿಂತ ಹೆಚ್ಚಿನ ಮೊತ್ತದ ಮೇಲೆ ಮಾತ್ರ ತೆರಿಗೆ ವಿಧಿಸಬೇಕು, ಸಂಪೂರ್ಣ ಮೊತ್ತದ ಮೇಲೆ ಅಲ್ಲ ಎಂದು ತೀರ್ಪು ನೀಡಿತ್ತು. ಆದಾಗ್ಯೂ, ಆ ತೀರ್ಪು ತಮಿಳುನಾಡು ಹೊರಗಿನ ಸೊಸೈಟಿಗಳಿಗೆ ಅನ್ವಯಿಸುವುದಿಲ್ಲ.