ಬೆಂಗಳೂರು: ಬಿಜೆಪಿ ಶಾಸಕರಾಗಿದ್ದರೂ ಪಕ್ಷದ ಯಾವುದೇ ಕಾರ್ಯಚಟುವಟಿಕೆ, ಹೋರಾಟದಲ್ಲಿ ಭಾಗಿಯಾಗದೇ ಕಾಂಗ್ರೆಸ್ ನತ್ತ ಮುಖ ಮಾಡಿರುವ ಉತ್ತರ ಕನ್ನಡ ಜಿಲೆಯ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ನಡೆ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಗರಂ ಆಗಿದ್ದಾರೆ. ಹೆಬ್ಬಾರ್ ಈಗ ನಮ್ಮ ಪಕ್ಷದವರಲ್ಲ ಎಂದು ನೇರವಾಗಿ ಗುಡುಗಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಆರ್.ಅಶೋಕ್, ಶಾಸಕ ಶಿವರಾಮ್ ಹೆಬ್ಬಾರ್ ಗೂ ನಮಗೂ ಮುಗಿದ ಅಧ್ಯಾಯ. ಈಗ ಅವರು ನಮ್ಮ ಪಕ್ಷದವರಲ್ಲ. ಹೆಬ್ಬಾರ್ ಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ನೇರವಾಗಿ ಕಿಡಿಕಾರಿದ್ದಾರೆ.
ನಾವು ಹೋರಾಟ, ಪ್ರತಿಭಟನೆ ಮಾಡುತ್ತಿದ್ದರೆ ಅವರು ಕುಳಿತೇ ಇದ್ದಾರೆ. ಹಿಂದುತ್ವದ ಪರ ಮಾತನಾಡಿವ, ಹೋರಾಡುವವರಿಗೆ ನಮ್ಮ ಬೆಂಬಲ ಎಂದು ಯತ್ನಾಳ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಇದೇ ವೇಳೆ ಯತ್ನಾಳ್ ಗೆ ಕೊಲೆ ಬೆದರಿಕೆ ಖಂಡಿಸುತ್ತೇವೆ ಎಂದು ಗುಡುಗಿದರು.
ಇತ್ತೀಚೆಗೆ ಯಲ್ಲಾಪುರದಲ್ಲಿ ನಡೆದಿದ್ದ ಬಿಜೆಪಿ ಜನಾಕ್ರೋಶ ಯಾತ್ರೆಯಲ್ಲಿಯೂ ಭಾಗಿಯಾಗದೇ ಶಾಸಕ ಶಿವರಾಮ್ ಹೆಬ್ಬಾರ್ ದೂರ ಉಳಿದಿದ್ದರು. ಪಕ್ಷದ ಎಲ್ಲಾ ಕಾರ್ಯಕ್ರಮಗಳಿಂದಲೂ ದೂರ ಉಳಿದಿರುವ ಹೆಬ್ಬಾರ್ ನಡೆಗೆ ರಾಜ್ಯಾಧ್ಯಕ್ಷ ವಿಜಯೇಂದ್ರ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಮುಂದಿನ ಚುನಾವಣೆಯಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಕ್ಷೇತ್ರದ ಟಿಕೆಟ್ ಎಂದು ಹೇಳುವ ಮೂಲಕ ಟಾಂಗ್ ನೀಡಿದ್ದರು.