ಬೆಂಗಳೂರು: ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿರುವ ಬಹುಭಾಷಾ ನಟ ಕಮಲ್ ಹಾಸನ್ ವಿರುದ್ಧ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಮಲ್ ಹಾಸನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಕಮಲ್ ಹಾಸನ್ ಕೂಡಲೆ ಕನ್ನಡಿಗರ ಕ್ಷಮೆ ಕೇಳಲಿ ಎಂದು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ಕಮಲ್ ಹಾಸನ್ ಆಗಿರಲಿ, ಯಾರೇ ಆಗಿರಲಿ ಇಂತಹ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ. ಕನ್ನಡ ತಮಿಳಿನಿಂದ ಹುಟ್ಟಿದ್ದು ಎಂಬುದು ತಪ್ಪು. ಇಂತಹ ಉದ್ಧಟತನದ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಕಮಲ್ ಹಾಸನ್ ತಕ್ಷಣ ಕನ್ನಡಿಗರ ಕ್ಷಮೆ ಕೇಲಲಿ. ಇಲ್ಲವಾದಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆಯುತ್ತೇನೆ ಅವರಿಗೆ ಕನ್ನಡ ಚಿತ್ರರಂಗ ನಿಷೇಧ ಹೇರುವಂತೆ ಆಗ್ರಹಿಸುತ್ತೇನೆ. ಕ್ಷಮೆ ಕೇಳದಿದ್ದರೆ ಅವರ ಸಿನಿಮಾಗಳ ಮೇಲೆ ನಿರ್ಬಂಧ ಹೇರಲಾಗುತ್ತದೆ ಎಂದು ತಿಳಿಸಿದರು.
ಕಮಲ್ ಹಾಸನ್ ಹೇಳಿಕೆ ನೀಡುವಾಗ ನಟ ಶಿವರಾಜ್ ಕುಮಾರ್ ಕೂಡ ಅದೇ ಕಾರ್ಯಕ್ರಮದಲ್ಲಿ ಇದ್ದರು. ಶಿವರಾಜ್ ಕುಮಾರ್ ಅವರು ಆಗಲೇ ಈ ಘಟನೆಯನ್ನು ಖಂಡಿಸಬೇಕಿತ್ತು. ಶಿವರಾಜ್ ಕುಮಾರ್ ತಕ್ಷಣ ಈ ಘಟನೆ ಖಂಡಿಸಲಿ ಎಂದು ಸಚಿವರು ಒತ್ತಾಯಿಸಿದ್ದಾರೆ.