ಶಿವಮೊಗ್ಗ: ತೆಪ್ಪ ಮಗುಚಿ ಬಿದ್ದು, ಯುವಕ ನೀರುಪಾಲಾಗಿರುವ ಗಹ್ಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೊಸೂರು ಗ್ರಾಮದ ಬಂಟೋಡಿಯಲ್ಲಿ ನಡೆದಿದೆ.
ಮೂವರು ತೆಪ್ಪದಲ್ಲಿ ಹೊಳೆ ದಾಟುತ್ತಿದ್ದಾಗ ಏಕಾಏಕಿ ತೆಪ್ಪ ಮಗುಚಿ ಬಿದ್ದು, ಯುವಕರು ನೀರುಪಾಲಾಗಿದ್ದಾರೆ. ಇಬ್ಬರು ಯುವಕರು ಈಜಿ ದಡ ಸೇರಿ ಬಚಾವಾಗಿದ್ದಾರೆ. ಆದರೆ ಓರ್ವ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
22 ವರ್ಷದ ಪೂರ್ಣೇಶ್ ಮೃತ ಯುವಕ. ಶರತ್ ಹಾಗೂ ರಂಜನ್ ಪ್ರಾಣಾಪಾಯದಿಂದ ಪಾರಾದ ಯುವಕರು. ಮುಳುಗು ತಜ್ಞ ಈಶ್ವರ್ ಮಲ್ಪೆ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಪೂರ್ಣೇಶ್ ಮೃತದೇಹವನ್ನು ಹೊರತೆಗೆದಿದೆ. 40 ಅಡಿ ಆಳದಲ್ಲಿ ಪೂರ್ಣೇಶ್ ಮೃತದೇಹ ಸಿಕ್ಕಿದೆ. ಬಂಟೋಡಿ ಬಳಿ ಹೊಳೆ ದಾಟಲು ಕಾಲು ಸಂಕದ ವ್ಯವಸ್ಥೆ ಕೂಡ ಇಲ್ಲ. ಸೇತುವೆ ನಿರ್ಮಾಣಕ್ಕಾಗಿ ಹಲವು ಬಾರಿ ಮನವಿ ಮಾಡಿದರೂ ಜನಪ್ರತಿನಿಧಗಳು ಈ ಬಗ್ಗೆ ಗಮನ ಹರಿಸಿಲ್ಲ. ಹೊಳೆ ಆಚೆ ಗ್ರಾಮಗಳಿಗೆ ಹೋಗಬೇಕೆಂದರೆ ತೆಪ್ಪದಲ್ಲಿ ಹೋಗಬೇಕಾದ ಸ್ಥಿತಿಯಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.