ಶಿವಮೊಗ್ಗ: ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ, ಹೆರಿಗೆ ಪ್ರಕರಣಗಳು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಯಾದಗಿರಿ ಜಿಲ್ಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಹೆರಿಗೆಯಾದ ಘಟನೆ ಬೆಳಕಿಗೆ ಬಂದಿತ್ತು. ಇದೀಗ ಇಂಥದ್ದೇ ಘಟನೆ ಶಿವಮೊಗ್ಗದಲ್ಲಿಯೂ ನಡೆದಿದೆ. ಕಾಮುಕನೊಬ್ಬ 9ನೇ ತರಗತಿ ವಿದ್ಯಾರ್ಥಿನಿಯನ್ನು ಗರ್ಭವತಿಯನ್ನಾಗಿಸಿದ್ದು, ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ್ದಾಳೆ.
ವಿದ್ಯಾಭ್ಯಾಸ ಮಾಡಿ, ಭವಿಷ್ಯ ರೂಪಿಸಿಕೊಳ್ಳಬೇಕಿದ್ದ ವಿದ್ಯಾರ್ಥಿನಿ ಕಾಮುಕನ ದೌರ್ಜನ್ಯಕ್ಕೆ ಬಲಿಯಾಗಿ ಮಗುವಿಗೆ ಜನ್ಮ ನೀಡಿದ್ದಾಳೆ. ಬಾಲಕಿ ಮನೆಯಲ್ಲಿಯೇ ಹೆರಿಗೆಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಅಜ್ಜಿಯೊಬ್ಬರು ಬಾಲಕಿಗೆ ಹೆರಿಗೆ ಮಾಡಿಸಿದ್ದು, ಏಳು ತಿಂಗಳಲ್ಲೇ ಬಾಲಕಿ ಹೆರಿಗೆಯಾಗಿದ್ದಾಳೆ. ಮಗು ಹಾಗೂ ತಾಯಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಗುವಿನ ತೂಕ 1.8 ಕೆಜಿ ಇದ್ದು, ತಾಯಿ-ಮಗು ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ಹೆರಿಗೆ ಪ್ರಕರಣ ಸಂಬಂಧ ಪೋಕ್ಸೋ ಕೇಸ್ ದಾಖಲಾಗಿದ್ದು, ಆರೋಪಿ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ.