ಮದುವೆಯಾಗು ಎಂದಿದ್ದಕ್ಕೆ ಪ್ರಿಯತಮೆಯನ್ನು ಕೊಂದು ಹೂತಿಟ್ಟ ಪ್ರಿಯಕರ

ಶಿವಮೊಗ್ಗ: ಪ್ರೀತಿಸಿದ ಯುವತಿ ಮದುವೆಯಾಗು ಎಂದಿದ್ದಕ್ಕೆ ಕಿರಾತಕ ಪ್ರಿಯತಮ ಆಕೆಯನ್ನು ಹತ್ಯೆಗೈದು ಹೂತಿಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೆದ್ದಾರಿಪುರ ಗ್ರಾಮದಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದ ಸೌಮ್ಯ ಪ್ರಿಯಕರನಿಂದಲೇ ಕೊಲೆಯಾದ ಯುವತಿ. ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಸೃಜನ್ ಪ್ರಿಯತಮೆಯನ್ನೇ ಕೊಂದು ಹೂತಿಟ್ಟ ಯುವಕ.

ಸೃಜನ್ ಹಾಗೂ ಸೌಮ್ಯ ಎರಡುವರೆ ವರ್ಷಗಳಿಂದ ಪ್ರೀತಿಸುತ್ತಿದ್ದರು. ಸೃಜನ್ ತೀರ್ಥಹಳ್ಳಿಯಲ್ಲಿ ಫೈನಾನ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಆಗಾಗ ಹಣ ವಸೂಲಿಗಾಗಿ ಕೊಪ್ಪಕ್ಕೆ ಹೋಗುತ್ತಿದ್ದ. ಈ ವೇಳೆ ನರ್ಸಿಂಗ್ ಓದುತ್ತಿದ್ದ ಸೌಮ್ಯ ಪರಿಚಯವಾಗಿ ಇಬ್ಬರೂ ಪ್ರೀತಿಸುತ್ತಿದ್ದರು. ಆದರೆ ಬೇರೆ ಬೇರೆ ಸಮುದಾಯದವರಾದ್ದರಿಂದ ಸೃಜನ್ ಮನೆಯಲ್ಲಿ ಈ ಮದುವೆಗೆ ನಿರಾಕರಿಸಿದ್ದರು.

ಆದರೆ ಯುವತಿ ಸೌಮ್ಯ, ತನ್ನನ್ನು ಮದುವೆಯಾಗುವಂತೆ ಸೃಜನ್ ಗೆ ಒತ್ತಾಯಿಸಿದ್ದಳು. ಮದುವೆ ವಿಚಾರವಾಗಿಯೇ ಸೌಮ್ಯ ಜುಲೈ 2ರಂದು ಕೊಪ್ಪದಿಂದ ತೀರ್ಥಹಳ್ಳಿಗೆ ಬಂದಿದ್ದಳು. ಸೃಜನ್ ಭೇಟಿಯಾಗಿ ತನ್ನನ್ನು ನಿನ್ನ ಮನೆಗೆ ಕರೆದುಕೊಂಡು ಹೋಗು ಎಂದು ಒತ್ತಡ ಹಾಕಿದ್ದಳು ಎನ್ನಲಾಗಿದೆ. ಆದರೆ ಮನೆಗೆ ಕರೆದೊಯ್ಯಲು ಸೃಜನ್ ಒಪ್ಪಿಲ್ಲ ಸದ್ಯಕ್ಕೆ ಬೇಡ ಎಂದು ಹೇಳಿದ್ದಾನೆ. ಇದರಿಂದ ಬೇಸರಗೊಂಡ ಸೌಮ್ಯ ಗಲಾಟೆ ಮಾಡಿದ್ದಾಳೆ. ತೀರ್ಥಹಳ್ಳಿಯ ಹೆದ್ದಾರಿಪುರ ಬಳಿ ಇಬ್ಬರ ನಡುವೆ ಜಗಳವಾಗಿದೆ. ಕೋಪದಲ್ಲಿ ಸೌಮ್ಯ ಮೇಲೆ ಹಲ್ಲೆ ನಡೆಸಿದ್ದಾನೆ. ಅಲ್ಲದೇ ಆಕೆಯ ಕತ್ತು ಹಿಸುಕಿ ಬೆದರಿಸಿದ್ದಾನೆ. ಕತ್ತು ಹಿಸುಕುತ್ತಿದ್ದಂತೆ ಸೌಮ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಸೌಮ್ಯ ಸಾವನ್ನಪ್ಪಿದ್ದು ತಿಳಿಯುತ್ತಿದ್ದಂತೆ ಗಾಬರಿಯಾದ ಸೃಜನ್, ಆಕೆಯ ಶವವನ್ನು ಮುಂಬಾಳು ಬಳಿ ಹೂತಿಟ್ಟು ಪರಾರಿಯಾಗಿದ್ದಾನೆ.

ಸೌಮ್ಯ ಮನೆಗೆ ಬಾರದಿರುವುದನ್ನು ಕಂಡು ಕಂಗಾಲಾದ ಪೋಷಕರು ಕೊಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ. ಸಾಗರಕ್ಕೆ ಆಗಮಿಸಿದ ಪೊಲೀಸರು ಯುವಕ ಸೃಜನ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸೌಮ್ಯ ಕೊಲೆ ರಹಸ್ಯ ಬಯಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read