ಬೆಂಗಳೂರು: ನಟಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣದಲ್ಲಿ ಉದ್ಯಮಿ, ನಿರ್ಮಾಪಕ, ಕ್ರಿಕೆಟಿಗ ಅರವಿಂದ್ ವೆಂಕಟೇಶ್ ರೆಡ್ಡಿಯನ್ನು ಬೆಂಗಳೂರಿನ ಗೋವಿಂದರಾಜನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶ್ರೀಲಂಕಾದಿಂದ ಬೆಂಗಳೂರಿಗೆ ಬಂದಿಳಿದ ಆರೋಪಿ ಅರವಿಂದ್ ವೆಂಕಟೇಶ್ ನನ್ನು ಪೊಲೀಸರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ಬಂಧಿಸಿ, ವಿಚಾರಣೆಗೆ ಕರೆದೊಯ್ದಿದ್ದಾರೆ.
ಸಂತ್ರಸ್ತ ನಟಿ ಹಗೂ ನಿರ್ಮಾಪಕ, ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಹಲವು ವರ್ಷಗಳಿಂದ ಪರ್ಚಿತರು. ಕ್ರಿಕೆಟ್ ಪಂದ್ಯಾವಳಿ, ವಿವಿಧ ಕಾರ್ಯಕ್ರಮಕ್ಕೆ ಅರವಿಂದ್ ವೆಂಕಟೇಶ್ ನಟಿಯನ್ನು ಅತಿಥಿಯನ್ನಾಗಿ ಆಹ್ವಾನಿಸುತ್ತಿದ್ದ. ಬರಬರುತ್ತಾ ನಟಿಯ ಹಿಂದೆ ಬಿದ್ದಿದ್ದ ಅರವಿಂದ್ ವೆಂಕಟೇಶ್ ತನ್ನ ಜೊತೆ ಅಕ್ರಮ ಸಂಬಂಧ ಹೊಂದುವಂತೆ ಬಲವಂತ ಮಾಡುತ್ತಿದ್ದ. ಅಲ್ಲದೇ ನೀನಿರುವ ಮನೆಗೆ ಬರುವುದಾಗಿ ಹೇಳಿ ಬೆದರಿಕೆ ಹಾಕುತ್ತಿದ್ದನಂತೆ.
ನಟಿಯನ್ನು ಇನ್ನಿಲ್ಲದಂತೆ ಪೀಡಿಸುತ್ತಿದ್ದ ಅರವಿಂದ್ ವೆಂಕಟೇಶ್ ಕಿರುಕುಳಕ್ಕೆ ನೊಂದು ಜೂನ್ 14, 2024ರಂದು ನಟಿ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಪೊಲೀಸ್ ಠಾಣೆಯಲ್ಲಿಯೂ ಅರವಿಂದ್ ವೆಂಕಟೇಶ್ ವಿರುದ್ಧ ದೂರು ದಾಖಲಾಗಿತ್ತು. ಇಷ್ಟಾದರೂ ಬೆದರಿಕೆ ಹಾಕುವುದನ್ನು, ಕಿರುಕುಳವನ್ನು ಅರವಿಂದ್ ವೆಂಕಟೇಶ್ ನಿಲ್ಲಿಸಿರಲಿಲ್ಲ. ಒಮ್ಮೆ ಮನೆಗೆ ಬಂದು ನಟಿಯ ಮೇಲೆ ಹಲ್ಲೆ ನಡೆಸಿ ಬಟ್ಟೆ ಹರಿದು ಹಾಕಿ ಅರೆಬೆತ್ತಲೆಗೊಳಿಸಿ ಹಿಂಸಿಸಿದ್ದ. ಇದರಿಂದ ಬೇಸತ್ತ ನಟಿ ನಿದ್ದೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಅಸ್ವಸ್ಥಳಾಗಿದ್ದ ನಟಿಯನ್ನು ಜೆಪಿ ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಆಸ್ಪತ್ರೆಯಿಂದ ಮಾರತ್ತಹಳ್ಳಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.
ಆಸ್ಪತ್ರೆಗೆ ಬಂದಿದ್ದ ಅರವಿಂದ್ ವೆಂಕಟೇಶ್, ಆಸ್ಪತ್ರೆಯಲ್ಲಿಯೂ ನಟಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಈ ಬಗ್ಗೆ ಗೋವಿಂದರಾಜನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಅವರವಿಂದ್ ವೆಂಕಟೇಶ್ ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.
