ಭೋಪಾಲ್: ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಮಿಷನರಿ ಆಸ್ಪತ್ರೆಯಲ್ಲಿ ನಕಲಿ ಹೃದ್ರೋಗ ತಜ್ಞರೊಬ್ಬರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಈತನಿಂದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ 7 ಜನ ಸಾವನ್ನಪ್ಪಿದ್ದಾರೆ.
ದುರಂತ ನಡೆಯುತ್ತಿದ್ದಂತೆ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(NHRC) ಮಧ್ಯಪ್ರವೇಶಿಸಿ, ಮಾರಕ ವೈದ್ಯಕೀಯ ದುಷ್ಕೃತ್ಯದ ಹಿಂದಿನ ಸತ್ಯವನ್ನು ಬಹಿರಂಗಪಡಿಸಲು ತನಿಖೆ ಪ್ರಾರಂಭಿಸಿದೆ.
ದಾಮೋಹನಗರದ ಖಾಸಗಿ ಮಿಷನರಿ ಆಸ್ಪತ್ರೆಯಲ್ಲಿ ಒಂದು ತಿಂಗಳಲ್ಲಿ 7 ಮೃತಪಟ್ಟಿದ್ದರು. ಈ ಸಂಬಂಧ ವೈದ್ಯನನ್ನು ಅಧಿಕಾರಿಗಳು ವಿಚಾರಿಸಿದಾಗ ಆತ ನಕಲಿ ವೈದ್ಯ ಎನ್ನುವುದು ಗೊತ್ತಾಗಿದೆ. ಮಕ್ಕಳ ಕಲ್ಯಾಣ ಸಮಿತಿಯ ಜಿಲ್ಲಾಧ್ಯಕ್ಷ ದೀಪಕ್ ತಿವಾರಿ, ಅಧಿಕೃತ ಸಾವಿನ ಸಂಖ್ಯೆ 7 ಆಗಿದ್ದರೂ ಇನ್ನು ಹೆಚ್ಚಿನ ಜನರು ಮೃತಪಟ್ಟಿರುವ ಸಾಧ್ಯತೆ ಇದೆ. ಈ ವೈದ್ಯನ ವಿರುದ್ಧ ಈ ಹಿಂದೆಯೇ ನಾನು ದಾಮೋಹ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ದೂರು ನೀಡಿದ್ದೆ ಎಂದು ತಿಳಿಸಿದ್ದಾರೆ.
ಸದಸ್ಯ ಪ್ರಿಯಾಂಕ್ ಕನೂಂಗೊ ನೇತೃತ್ವದ NHRC ಅಧಿಕಾರಿಗಳ ತಂಡವು ಏಪ್ರಿಲ್ 7 ರಿಂದ 9 ರವರೆಗೆ ದಾಮೋಹ್‌ಗೆ ಆಗಮಿಸಿ ಘಟನೆಯ ತನಿಖೆ ನಡೆಸಲು ಮುಂದಾಗಿದೆ.
ವಿದೇಶಿ ಅರ್ಹತೆಗಳನ್ನು ಹೊಂದಿದ್ದಾರೆಂದು ಹೇಳಿಕೊಳ್ಳುವ ಡಾ. ಎನ್. ಜಾನ್ ಕ್ಯಾಮ್’ ಎಂಬ ವ್ಯಕ್ತಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆರೋಪಿ ನರೇಂದ್ರ ವಿಕ್ರಮಾದಿತ್ಯ ಯಾದವ್ ರೋಗಿಗಳನ್ನು ವಂಚಿಸಲು ಖ್ಯಾತ ಯುಕೆ ಹೃದ್ರೋಗ ತಜ್ಞ ಪ್ರೊಫೆಸರ್ ಜಾನ್ ಕ್ಯಾಮ್ ಅವರ ಹೆಸರನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ.
ಸ್ಥಳೀಯ ನಿವಾಸಿಯೊಬ್ಬರು NHRC ಗೆ ದೂರು ದಾಖಲಿಸಿದ್ದಾರೆ. ಯಾದವ್ ಅವರು ನೀಡಿದ ತಪ್ಪಾದ ಚಿಕಿತ್ಸೆಯಿಂದಾಗಿ ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಆಯುಷ್ಮಾನ್ ಯೋಜನೆಯ ಭಾಗವಾಗಿರುವ ಆಸ್ಪತ್ರೆಯು ಸರ್ಕಾರಿ ಹಣವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದರ ನಂತರ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ತನಿಖೆಯನ್ನು ಪ್ರಾರಂಭಿಸಿದೆ.
ಪ್ರಕರಣದ ತನಿಖೆಗಾಗಿ ನನ್ನ ಆದೇಶದ ಮೇರೆಗೆ ರಚಿಸಲಾದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ತನಿಖಾ ತಂಡವು ಏಪ್ರಿಲ್ 7 ರಿಂದ ಏಪ್ರಿಲ್ 9 ರವರೆಗೆ ದಾಮೋಹ್‌ನಲ್ಲಿ ಮೊಕ್ಕಾಂ ಹೂಡಿ ತನಿಖೆ ನಡೆಸುತ್ತದೆ. ಯಾವುದೇ ಮಾಹಿತಿಯನ್ನು ಒದಗಿಸಲು ಬಯಸಿದರೆ, ಅವರು ದಾಮೋಹ್‌ನಲ್ಲಿ ತನಿಖಾ ತಂಡವನ್ನು ಭೇಟಿ ಮಾಡಬಹುದು ಎಂದು ಕನೂಂಗೊ ತಿಳಿಸಿದ್ದಾರೆ.