ಸೆಲ್ಫಿ ಮೋಹ ತಂತು ಪ್ರಾಣಾಪಾಯ: ಥಾಯ್ಲೆಂಡ್‌ನಲ್ಲಿ ಭಾರತೀಯ ಪ್ರವಾಸಿಗನ ಮೇಲೆ ಹುಲಿ ದಾಳಿ | Viral Video

ಥಾಯ್ಲೆಂಡ್‌ನ ಪ್ರವಾಸಿ ಪಾರ್ಕ್ ಒಂದರಲ್ಲಿ ಹುಲಿಯು ಭಾರತೀಯ ಪ್ರವಾಸಿಗನ ಮೇಲೆ ದಾಳಿ ನಡೆಸಿದ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆನ್‌ಲೈನ್‌ನಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಕ್ಯಾಮೆರಾದಲ್ಲಿ ಸೆರೆಯಾಗಿರುವ ಈ ಘಟನೆ, “ಹುಲಿ ಸೆಲ್ಫಿ” ಆಕರ್ಷಣೆಗಳ ನೈತಿಕತೆಯ ಕುರಿತು ಮತ್ತೊಮ್ಮೆ ಚರ್ಚೆಯನ್ನು ಹುಟ್ಟುಹಾಕಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ, ಪ್ರವಾಸಿಗನೊಬ್ಬ ಹುಲಿಯ ಪಕ್ಕದಲ್ಲಿ ನಿಂತು ಫೋಟೋ ತೆಗೆಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತದೆ. ಈ ವೇಳೆ, ಅಲ್ಲಿದ್ದ ಸಿಬ್ಬಂದಿಯೊಬ್ಬರು ಕೋಲಿನಿಂದ ಹುಲಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಂತೆಯೇ, ಹುಲಿಯು ಆಕ್ರಮಣಕಾರಿಯಾಗಿ ವರ್ತಿಸಿ, ತಕ್ಷಣವೇ ಆ ವ್ಯಕ್ತಿಯ ಮೇಲೆ ಮುಗಿಬಿದ್ದಿದೆ. ಈ ದೃಶ್ಯ ನೋಡುಗರನ್ನು ಬೆಚ್ಚಿಬೀಳಿಸಿದೆ.

ಈ ರೀತಿಯ ಸೌಲಭ್ಯಗಳನ್ನು ಅಪಾಯಕಾರಿ ಮತ್ತು ಪ್ರಾಣಿ ಶೋಷಣೆಗೆ ಸಮಾನ ಎಂದು ನೆಟ್ಟಿಗರು ತೀವ್ರವಾಗಿ ಖಂಡಿಸಿದ್ದಾರೆ. “ಹುಲಿಗಳು ಸೆಲ್ಫಿ ತೆಗೆದುಕೊಳ್ಳುವ ಆಸ್ತಿಗಳಲ್ಲ” ಎಂದು ಒಬ್ಬ ಬಳಕೆದಾರರು ಬರೆದರೆ, ಮತ್ತೊಬ್ಬರು “ಈ ರೀತಿಯ ಅಪಾಯಕಾರಿ ಸಾಹಸಗಳನ್ನು ಯಾವಾಗಲೂ ತಪ್ಪಿಸಿ. ಪ್ರಾಣಿಗಳು ಪ್ರಾಣಿಗಳೇ. ಅವುಗಳ ಬಗ್ಗೆ ದಯೆ ಮತ್ತು ಪ್ರೀತಿ ಇರಲಿ, ಆದರೆ ಅವುಗಳಿಂದ ಪ್ರೀತಿಯನ್ನು ಹಿಂದಿರುಗಿಸಲು ನಿರೀಕ್ಷಿಸಬೇಡಿ, ಏಕೆಂದರೆ ಅವು ಪ್ರಾಣಿಗಳು” ಎಂದು ಹೇಳಿದ್ದಾರೆ.

ಇನ್ನು ಕೆಲವು ಬಳಕೆದಾರರು, ಪ್ರವಾಸಿಗ ಹುಲಿಯ ದೇಹದ ಸೂಕ್ಷ್ಮ ಭಾಗಗಳನ್ನು ಪದೇ ಪದೇ ಸ್ಪರ್ಶಿಸಿದ್ದರಿಂದ ಹುಲಿ ಕೋಪಗೊಂಡಿರಬಹುದು ಎಂದು ಊಹಿಸಿದ್ದಾರೆ. “ಬೆಕ್ಕುಗಳು ಸಾಮಾನ್ಯವಾಗಿ ಬೆನ್ನಿನ ಕೆಳಭಾಗ ಅಥವಾ ಪೃಷ್ಠದ ಬಳಿ ಮುಟ್ಟಿಸಿಕೊಳ್ಳಲು ಇಷ್ಟಪಡುವುದಿಲ್ಲ. ಈ ವ್ಯಕ್ತಿ ಹುಲಿಯ ದೇಹದ ಆ ಭಾಗಗಳನ್ನು ನಿರಂತರವಾಗಿ ಸ್ಪರ್ಶಿಸುತ್ತಿದ್ದನು, ಅದು ಹುಲಿಗೆ ಕಿರಿಕಿರಿಯನ್ನುಂಟು ಮಾಡಿರಬಹುದು. ಕೊನೆಯದಾಗಿ, ಅವನು ಫೋಟೋಕ್ಕಾಗಿ ಕುಳಿತಾಗ ಹುಲಿ ಕೆರಳಿದೆ” ಎಂದು ಒಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಈ ಘಟನೆ ಕಾಡು ಪ್ರಾಣಿಗಳನ್ನು ಪ್ರವಾಸಿ ಮನರಂಜನೆಗಾಗಿ ಬಳಸುವ ಅಪಾಯವನ್ನು ಎತ್ತಿ ತೋರಿಸುತ್ತದೆ. ತಾಯ್ಕೆಡ್‌ನ “ಟೈಗರ್ ಕಿಂಗ್‌ಡಮ್” ನಂತಹ ಸ್ಥಳಗಳಲ್ಲಿ, ಪ್ರವಾಸಿಗರಿಗೆ ಹುಲಿಗಳೊಂದಿಗೆ ನಿಕಟವಾಗಿ ಸಂವಹನ ನಡೆಸಲು, ಅವುಗಳಿಗೆ ಆಹಾರ ನೀಡಲು ಮತ್ತು ಸೆಲ್ಫಿ ತೆಗೆದುಕೊಳ್ಳಲು ಅವಕಾಶ ನೀಡಲಾಗುತ್ತದೆ. ಆದರೆ, ಈ ಹುಲಿಗಳನ್ನು ಪ್ರವಾಸಿಗರೊಂದಿಗೆ ಒಗ್ಗಿಕೊಳ್ಳುವಂತೆ ಮಾಡಲು ಅವುಗಳಿಗೆ ಮದ್ದು ನೀಡಲಾಗುತ್ತದೆ ಎಂದು ಆರೋಪಿಸಲಾಗಿದೆ. ಈ ಘಟನೆ ವೈಲ್ಡ್‌ಲೈಫ್ ಟೂರಿಸಂನ ನೈತಿಕತೆ ಮತ್ತು ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ರವಾಸಿಗನ ಸ್ಥಿತಿಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಥಾಯ್ಲೆಂಡ್ ಅಧಿಕಾರಿಗಳು ಅಥವಾ ಆ ಪಾರ್ಕ್‌ನ ಆಡಳಿತ ಮಂಡಳಿ ಈ ಕುರಿತು ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read