ಹುಬ್ಬಳ್ಳಿ: ಬಿಗಿ ಭದ್ರತೆ ನಡುವೆಯೂ ಪ್ರಧಾನಿ ಮೋದಿ ರೋಡ್ ಶೋ ವೇಳೆ ಹಾರ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ಪೊಲೀಸರು ಕರೆತಂದಿದ್ದಾರೆ.
ಬಾಲಕನೊಂದಿಗೆ ಆತನ ತಾಯಿ ಮತ್ತು ಕುಟುಂಬಸ್ಥರು ಆಗಮಿಸಿದ್ದಾರೆ. ಘಟನೆಯ ಬಗ್ಗೆ ಬಾಲಕನಿಂದ ಹುಬ್ಬಳ್ಳಿಯ ಗೋಕುಲ ರಸ್ತೆ ಠಾಣೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಮೋದಿ ರೋಡ್ ಶೋ ವೇಳೆ ಬಾಲಕ ಹೂವಿನ ಹಾರ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಭದ್ರತಾ ಲೋಪವಾಗಿಲ್ಲ. ಲಕ್ಷಾಂತರ ಜನರು ಸೇರಿದ್ದರು ಎಂದು ಕಮಿಷನರ್ ರಮಣ್ ಗುಪ್ತ ಹೇಳಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದ ಬಳಿ ಮಾತನಾಡಿದ ಅವರು, ಬ್ಯಾರಿಕೇಡ್ ದಾಟಿ ಬಂದ ಬಾಲಕನನ್ನು ಭದ್ರತಾ ಸಿಬ್ಬಂದಿ ತಡೆದಿದ್ದರು. ಅತ್ಯುತ್ಸಾಹದಿಂದ 10 ವರ್ಷದ ಬಾಲಕ ಈ ರೀತಿ ಮಾಡಿದ್ದಾನೆ ಅಷ್ಟೇ. ಮೋದಿಗೆ ಬಾಲಕ ಹಾರ ಹಾಕಿದ ಬಗ್ಗೆ ವಿಚಾರಣೆ ನಡೆಯುತ್ತಿದೆ. ನಮ್ಮಿಂದ ಯಾವುದೇ ಭದ್ರತಾ ಲೋಪವಾಗಿಲ್ಲ. ಪ್ರಕರಣದ ಬಗ್ಗೆ ಸಮಗ್ರ ವಿಚಾರಣೆಯ ನಂತರ ಪ್ರತಿಕ್ರಿಯೆ ನೀಡುತ್ತೇನೆ ಎಂದು ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತ ರಮಣ್ ಗುಪ್ತ ಹೇಳಿದ್ದಾರೆ.