ಮಂಡ್ಯ: ಶಾಲಾ ಶುಲ್ಕ ಪಾವತಿಸದ ಕಾರಣಕ್ಕೆ ಆಡಳಿತ ಮಂಡಳಿ ನೀಡಿದ ಕಿರುಕುಳದಿಂದ ಬೇಸತ್ತು ವಿದ್ಯಾರ್ಥಿನಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹುಲಿಗೆರೆಪುರ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಅನಿಕೇತನ ವಿದ್ಯಾ ಸಂಸ್ಥೆಯಲ್ಲಿ ಎಸ್ಎಸ್ಎಲ್ಸಿ ಓದುತ್ತಿದ್ದ ಹೆಚ್.ಎಲ್. ಮಿಲನ(15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಲಕ್ಷ್ಮಿಪ್ರಸಾದ್ ಮತ್ತು ರಶ್ಮಿ ಅವರ ಪುತ್ರಿಯಾಗಿರುವ ಮಿಲನ ಶಿಕ್ಷಣ ಹಕ್ಕು ಕಾಯ್ದೆಯಡಿ(RTE) ಶಾಲೆಗೆ ಆಯ್ಕೆಯಾಗಿದ್ದರು. ಆದರೂ ಶಾಲೆಯ ಆಡಳಿತ ಮಂಡಳಿ ಮತ್ತು ಮುಖ್ಯ ಶಿಕ್ಷಕಿ ಸೇರಿದಂತೆ ಮೂವರು ಶಿಕ್ಷಕರು ಶಾಲಾ ಶುಲ್ಕ ಪಾವತಿಸುವಂತೆ ಒತ್ತಾಯಿಸಿ ವಿದ್ಯಾರ್ಥಿನಿ ಮಿಲನಗೆ ಕಿರುಕುಳ ನೀಡಿದ್ದರು.
ಪ್ರಾರ್ಥನೆಯ ಸಮಯದಲ್ಲಿ ಭಾಗವಹಿಸಲು ಅವಕಾಶ ನೀಡದೆ ಬಹಿಷ್ಕಾರ ಹಾಕಿದ್ದರು. ಶನಿವಾರ ಕೂಡ ಪ್ರಾರ್ಥನೆಗೆ ಅವಕಾಶ ನೀಡಿರಲಿಲ್ಲ. ಇದರಿಂದ ಮನನೊಂದ ಮಿಲನ ಮಧ್ಯಾಹ್ನ ಶಾಲೆ ಬಿಟ್ಟು ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ದೂರು ನೀಡಿದ್ದಾರೆ. ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕಿ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ದಲಿತ ಸಂಘಟನೆ ಮುಖಂಡು ಆಗ್ರಹಿಸಿದ್ದಾರೆ.