ಬೆಂಗಳೂರು : ರಾಜ್ಯದಲ್ಲಿ “Still birth Surveillance and Response (SBSR)” ವ್ಯವಸ್ಥೆ ಜಾರಿ ಕುರಿತು ಸರ್ಕಾರ ಮಹತ್ವದ ಆದೇಶದ ಹೊರಡಿಸಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಿರ್ಜೀವ ಜನನಗಳನ್ನು ಗುರುತಿಸಿ, ಕಾರಣಗಳನ್ನು ವರ್ಗೀಕರಿಸಿ ಮತ್ತು ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಮಟ್ಟದ (Still Birth) , Still birth Surveillance and Response (SBSR) ರ ವ್ಯವಸ್ಥೆಯನ್ನು ಜಾರಿಗೊಳಿಸಲು ಈ ಕೆಳಕಂಡಂತೆ ಅನುಮೋದನೆ ನೀಡಿದೆ.
ಆಸ್ಪತ್ರೆ ಮಟ್ಟ: ಆಸ್ಪತ್ರೆಯ ನೋಡಲ್ ಅಧಿಕಾರಿಗಳು ನಿರ್ಜೀವ ಜನನದ 24 ಗಂಟೆಗಳ ಒಳಗಾಗಿ ಆಡಿಟ್ ನಡೆಸಿ, ವರದಿಯನ್ನು ಜಿಲ್ಲಾ ಮತ್ತು ರಾಜ್ಯ ಮಟ್ಟದ ನೋಡಲ್ ಅಧಿಕಾರಿಗಳಿಗೆ ಕೂಡಲೇ ಸಲ್ಲಿಸುವುದು.
(2) ಜಿಲ್ಲಾ ಮಟ್ಟದಲ್ಲಿ MDSR ಸಮಿತಿಯಿಂದ :ಪ್ರತಿ ತಿಂಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ (MDSR ಸಮಿತಿ) ಜಿಲ್ಲೆಗಳಲ್ಲಿ ಸಂಭವಿಸಿರುವ ಎಲ್ಲಾ ನಿರ್ಜೀವ ಜನನಗಳನ್ನು ಪರಿಶೀಲಿಸುವುದು.ಪ್ರತಿ ತ್ರೈಮಾಸಿಕದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ (MDSR ಸಮಿತಿ) ಆಯ್ಕೆ ಪ್ರಕರಣಗಳನ್ನು ಪರಿಶೀಲಿಸುವುದು.ಜಿಲ್ಲಾ ನೋಡಲ್ ಅಧಿಕಾರಿ (RCHO) ನಿರ್ಜೀವ ಜನನಗಳನ್ನು ಜಿಲ್ಲಾ ಆರೋಗ್ಯ ಸಂಘದ ಸಭೆಯ ಅಜೆಂಡಾದಲ್ಲಿ ಸೇರಿಸುವುದನ್ನು ಖಚಿತಪಡಿಸಿಕೊಳ್ಳುವುದು.
ನಿರ್ಜೀವ ಜನನಕ್ಕೆ ಕಾರಣಗಳನ್ನು ಗುರುತಿಸಿ, ಅವುಗಳನ್ನು ಸರಿಪಡಿಸುವಿಕೆಗೆ ಅವಶ್ಯವಿರುವ ಮಾರ್ಗದರ್ಶನ, ಅನುದಾನ, ಆಗಿಂದಾಗ್ಗೆ ಅನುಸರಣೆ ಹಾಗೂ ಮೇಲ್ವಿಚಾರಣೆ ಕುರಿತು ಚರ್ಚಿಸುವುದು.
(3) ರಾಜ್ಯ ಮಟ್ಟದ ನಿರ್ಜೀವ ಜನನ (Still Birth) ಆಡಿಟ್ ಸಮಿತಿ: ರಾಜ್ಯ ಮಟ್ಟದಲ್ಲಿ ಉಪ ನಿರ್ದೇಶಕರು (ತಾಯಿ ಆರೋಗ್ಯ), ಇವರು ನೋಡಲ್ ಅಧಿಕಾರಿಯಾಗಿರುತ್ತಾರೆ. ಕೆಳಗಿನ ಸದಸ್ಯರೊಂದಿಗೆ, ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಬೆಂಗಳೂರು, ರವರ ನೇತೃತ್ವದಲ್ಲಿ ನಿರ್ಜೀವ ಜನನದ (Still Birth) ಆಡಿಟ್ ಸಮಿತಿಯನ್ನು ರಚಿಸುವುದು.
ಸದಸ್ಯರು:
ಯೋಜನಾ ನಿರ್ದೇಶಕರು (RCH), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ.
ವೈದ್ಯಕೀಯ ಅಧೀಕ್ಷಕರು, ವಾಣಿ ವಿಲಾಸ್ ಆಸ್ಪತ್ರೆ, BMCRI, ಬೆಂಗಳೂರು.
ಉಪ ನಿರ್ದೇಶಕರು (ತಾಯಿ ಆರೋಗ್ಯ) ಸದಸ್ಯ ಕಾರ್ಯದರ್ಶಿ,
ಉಪ ನಿರ್ದೇಶಕರು (ಮಕ್ಕಳ ಆರೋಗ್ಯ).
ಸರ್ಕಾರಿ ಮತ್ತು ಖಾಸಗಿ ವಲಯದ ನುರಿತ ಸ್ತ್ರೀರೋಗ ಹಾಗೂ ಮಕ್ಕಳ ತಜ್ಞರು.
ಸಮಿತಿಯ ಕಾರ್ಯಗಳು:
ತಡೆಗಟ್ಟಬಹುದಾದ ಪ್ರಕರಣಗಳು ಮತ್ತು ಜಿಲ್ಲಾ/ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಸಂಭವಿಸಿದ ನಿರ್ಜೀವ ಜನನ ಪ್ರಕರಣಗಳ ಬಗ್ಗೆ ಜಿಲ್ಲೆಯಿಂದ ಬಂದಿರುವ ವರದಿಯನ್ನು ವರಿಶೀಲಿಸುವುದು.ಹೆಚ್ಚು ನಿರ್ಜೀವ ಜನನ ದರ ಹೊಂದಿದ ಜಿಲ್ಲೆಗಳಲ್ಲಿ ಮತ್ತು ತಡೆಗಟ್ಟಬಹುದಾದ ಆಯ್ಕೆಪ್ರಕರಣಗಳಿಗೆ ನಿರ್ಜೀವ ಜನನ (Still birth) ಕುರಿತು ರಾಜ್ಯ ಮಟ್ಟದ ಆಡಿಟ್ ನಡೆಸುವುದು. ಆರೋಗ್ಯ ವ್ಯವಸ್ಥೆಯ ನ್ಯೂನತೆಗಳನ್ನು ಗುರುತಿಸಿ, ತಿದ್ದುಪಡಿ ಕ್ರಮಗಳನ್ನು ಶಿಫಾರಸ್ಸು ಮಾಡುವುದು.ತ್ರೈಮಾಸಿಕ ವರದಿಗಳ ಮೂಲಕ ರಾಜ್ಯ ಮಟ್ಟದ ಶಿಫಾರಸುಗಳನ್ನು ಸಲ್ಲಿಸುವುದು.

