ದಾವಣಗೆರೆ: ನ್ಯಾಮತಿ ಎಸ್.ಬಿ.ಐ. ಬ್ಯಾಂಕ್ ನಲ್ಲಿ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲಾ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ವಿಜಯಕುಮಾರ್(32), ಅಜಯ್ ಕುಮಾರ್(33), ನ್ಯಾಮತಿಯ ನಿವಾಸಿ ಮಂಜುನಾಥ್(40), ಹೊನ್ನಾಳಿಯ ಅಭಿಷೇಕ್(28), ಚಂದ್ರಶೇಖರ್(34) ಅವರನ್ನು ಬಂಧಿಸಿ 224 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ತಮಿಳುನಾಡು ಮೂಲದ ಪರಮಾನಂದನ ಬಂಧನಕ್ಕಾಗಿ ತೀವ್ರ ಹುಡುಕಾಟ ನಡೆಸಲಾಗಿದೆ. ಬಂಧಿತ ವಿಜಯಕುಮಾರ್ ಮತ್ತು ಅಜಯಕುಮಾರ್ ಕಳೆದ ಎರಡು ವರ್ಷಗಳಿಂದ ನಾಮತಿಯಲ್ಲಿ ಬೇಕರಿ ನಡೆಸುತ್ತಿದ್ದರು. ವಿಜಯಕುಮಾರ್ ಮತ್ತು ಅಜಯ್ ಕುಮಾರ್ ಅವರಿಗೆ ಉಳಿದವರು ಸಾಥ್ ನೀಡಿದ್ದರು.
ನವೆಂಬರ್ 26ರಂದು ಬ್ಯಾಂಕ್ ನಲ್ಲಿದ್ದ 17 ಕೆಜಿ, 750 ಗ್ರಾಂ ಚಿನ್ನ ದೋಚಲಾಗಿತ್ತು. ಬ್ಯಾಂಕಿನಲ್ಲಿ 509 ಗ್ರಾಹಕರು ಅಡವಿಟ್ಟಿದ ಚಿನ್ನವನ್ನು ಕಳವು ಮಾಡಿದ್ದರು. ಉಳಿದ ಚಿನ್ನವನ್ನು ಜಪ್ತಿ ಹಾಗೂ ಪರಮಾನಂದನ ಬಂಧನಕ್ಕಾಗಿ ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದು ದಾವಣಗೆರೆ ಎಸ್‌ಪಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದಾರೆ.