ಬೆಂಗಳೂರು: ಧರ್ಮಸ್ಥಳದ ವಿರುದ್ಧ ಪಿತೂರಿ, ಷಡ್ಯಂತ್ರದ ಹಿಂದೆ ಮಾಜಿ ಡಿಸಿ, ಸಂಸದ ಸಸಿಕಾಂತ್ ಸೆಂಥಿಲ್ ಕೈವಾಡವಿದೆ ಎಂದು ಆರೋಪಿಸಿದ್ದ ಶಾಸಕ ಜನಾರ್ಧನ ರೆಡ್ಡಿ ವಿರುದ್ಧ ಸಸಿಕಾಂತ್ ಸೆಂಥಿಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವಕೀಲರ ಮೂಲಕ ಖುದ್ದು ಹಾಜರಾಗಿದ್ದ ಸಸಿಕಾಂತ್ ಸೆಂಥಿಲ್, ಜನಾರ್ಧನ ರೆಡ್ಡಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಇದನ್ನು ಮಾನ್ಯ ಮಾಡಿರುವ ನ್ಯಾಯಾಧೀಶರು ಸೆಪೆಟೆಂಬರ್ 11ಕ್ಕೆ ವಿಚಾರಣೆಯನ್ನು ನಿಗದಿಪಡಿಸಿದ್ದಾರೆ.
ಪ್ರಕರಣ ದಾಖಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೆಂಥಿಲ್, ನನ್ನ ವಿರುದ್ಧ ಆಧಾರರಹಿತ ಆರೋಪ ಮಾಡಲಾಗಿದೆ. ಜನಾರ್ಧನ ರೆಡ್ಡಿ ರಾಜಕೀಯ ದುರುದ್ದೇಶದಿಂದ ನನ್ನ ಹೆಸರನ್ನು ಉಲ್ಲೇಖಿಸಿ ಆರೋಪ ಮಾಡುತ್ತಿದ್ದಾರೆ. ಕೋರ್ಟ್ ಗೆ ಬಂದು ಉತ್ತರ ಕೊಡಲಿ ಎಂದು ಹೇಳಿದರು.