ಬೆಂಗಳೂರು: ಶ್ರಮಿಕ ವರ್ಗಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಗುಡ್ ನ್ಯೂಸ್ ನೀಡಿದ್ದಾರೆ. ಕಾರ್ಮಿಕರ ಕನಿಷ್ಠ ವೇತನದ ಬಗ್ಗೆ ಪರಿಷ್ಕೃತ ಅಧಿಸೂಚನೆ ಹೊರಡಿಸುವ ಮೂಲಕ ಮತ್ತೊಮ್ಮೆ ಕಾರ್ಮಿಕರ ಬಾಳಿಗೆ ಬೆಳಕಾಗಿದ್ದಾರೆ.
ಈ ಅಧಿಸೂಚನೆಯಲ್ಲಿ ವಿವಿಧ ರೀತಿಯ ಉದ್ದಿಮೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಕನಿಷ್ಠ ವೇತನವನ್ನು ನಿಗದಿ ಮಾಡಿ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಇದರಿಂದ ರಾಜ್ಯದ ಕೋಟ್ಯಂತರ ಕಾರ್ಮಿಕರಿಗೆ ಸಹಾಯವಾಗಲಿದೆ. ಎಲ್ಲಾ ವರ್ಗದ ಕಾರ್ಮಿಕರಿಗೆ ಸಮಾನವಾದ ಕನಿಷ್ಠ ವೇತನ ದೊರೆಯಬೇಕು ಎಂಬ ಉದ್ದೇಶದಿಂದ ಉದ್ದಿಮೆಗಳನ್ನು ವಿಂಗಡಿಸಿ ರಾಜ್ಯ ಸರ್ಕಾರವು ಈ ಅಧಿಸೂಚನೆ ಪ್ರಕಟಿಸಿದೆ.
ಇದರಿಂದ ಯಾವ ಉದ್ದಿಮೆಗಳಲ್ಲಿ ಯಾವ ಕಾರ್ಮಿಕರು ಇರಲಿದ್ದಾರೆ? ಅವರ ವೇತನ ಎಷ್ಟಿರಲಿದೆ? ಕುಶಲ ಮತ್ತು ಅಕುಶಲ ಕಾರ್ಮಿಕರು ಯಾರು? ಕಾರ್ಮಿಕರಿಗೆ ದಿನಕ್ಕೆ ಮತ್ತು ತಿಂಗಳಿಗೆ ವೇತನ ಎಷ್ಟು ಸಿಗಲಿದೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೂಡ ಸಿಗಲಿದೆ. ಈ ಮೊದಲು ಉದ್ದಿಮೆವಾರು ಅಧಿಸೂಚನೆಯನ್ನು ಹೊರಡಿಸಲಾಗುತ್ತಿತ್ತು. ಇದೀಗ ಅದನ್ನು ಬದಲಾಯಿಸಿ, ಏಕರೂಪ ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಬೇರೆ ಬೇರೆ ಉದ್ದಿಮೆಗಳಲ್ಲಿ ವಲಯಗಳಿಗೆ ಅನುಸಾರವಾಗಿ ಮತ್ತು ಕಾರ್ಮಿಕರು ಹೊಂದಿರುವ ಕೌಶಲ್ಯದ ಆಧಾರದ ಮೇಲೆ ವೇತನ ದರದಲ್ಲಿ ವ್ಯತ್ಯಾಸಗಳಿರುತ್ತವೆ. ಕಾರ್ಮಿಕರು ಮಾಡುವ ಕೆಲಸ ಮತ್ತು ಅವರು ಹೊಂದಿರುವ ಕುಶಲತೆ ಮೇಲೆ ಅವರ ವೇತನ ನಿಗದಿಯಾಗಲಿದೆ. ಈಗ ಏಕರೂಪದ ಅಧಿಸೂಚನೆಯಲ್ಲಿ ಎಲ್ಲವನ್ನು ಸಮಗ್ರವಾಗಿ ವಿವರಿಸಲಾಗಿದ್ದು, ಕಾರ್ಮಿಕರಿಗೆ ಇದರಿಂದ ತುಂಬ ಸಹಾಯವಾಗಲಿದೆ.
ಈ ಕುರಿತು ಸಲಹೆ ಮತ್ತು ಆಕ್ಷೇಪಣೆಗಳು ಇದ್ದಲ್ಲಿ ಸರ್ಕಾರದ ಕಾರ್ಯದರ್ಶಿಗಳು, ಕಾರ್ಮಿಕ ಇಲಾಖೆ, ನಾಲ್ಕನೇ ಮಹಡಿ, ವಿಕಾಸಸೌಧ ಬೆಂಗಳೂರು ಅಥವಾ ಆಯುಕ್ತರು, ಕಾರ್ಮಿಕ ಇಲಾಖೆ, ಕಾರ್ಮಿಕ ಭವನ, ಬನ್ನೇರುಘಟ್ಟ ರಸ್ತೆ ಬೆಂಗಳೂರು ಇವರಿಗೆ ತಿಳಿಸಬಹುದಾಗಿದೆ.
ಕಾರ್ಮಿಕರ ಕನಿಷ್ಠ ವೇತನ ದರವನ್ನು ಪರಿಷ್ಕರಿಸಲು ಯಾವುದೇ ರೀತಿಯ ಅಡೆತಡೆ ಇಲ್ಲದ ಕಾರಣ ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಕನಿಷ್ಠ ವೇತನ ಪರಿಷ್ಕರಿಸಲಾಗಿದೆ. ಇದರನ್ವಯ ಅತಿ ಕುಶಲ, ಕುಶಲ, ಅರೆ ಕುಶಲ ಕಾರ್ಮಿಕರಿಗೆ ದಿನಕ್ಕೆ ಎಷ್ಟು ವೇತನ, ತಿಂಗಳಿಗೆ ಎಷ್ಟು ವೇತನ ಎಂಬುದರ ಬಗ್ಗೆ ಸ್ಪಷ್ಟನೆಗೆ ಬರಲಾಗಿದೆ.
2022-23ನೇ ಸಾಲಿನಲ್ಲಿ 34 ಅನುಸೂಚಿತ ಉದ್ದಿಮೆಗಳಿಗೆ ಕನಿಷ್ಠ ವೇತನ ದರಗಳನ್ನು ಪರಿಷ್ಕರಿಸಿ ಹೊರಡಿಸಲಾಗಿದ್ದ ಅಧಿಸೂಚನೆಗಳನ್ನು ಹಿಂಪಡೆದು ಮೆ| ರೆಪ್ಟಕೋಸ್ ಬ್ರೆಟ್ ಅಂಡ್ ಕಂ. ಪ್ರಕರಣದ ಮಾನದಂಡಗಳ ಅನ್ವಯ ಹೊಸದಾಗಿ ಅಧಿಸೂಚನೆಗಳನ್ನು ಹೊರಡಿಸುವ ಕುರಿತು ಕಾನೂನು ಇಲಾಖೆಯ ಅಭಿಪ್ರಾಯ ಕೋರಲಾಗಿತ್ತು. ಇದಕ್ಕೆ ಯಾವುದೇ ಅಡೆತಡೆಗಳು ಇಲ್ಲದ ಕಾರಣ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನ್ವಯ ಕನಿಷ್ಠ ವೇತನವನ್ನು ಪರಿಷ್ಕರಿಸಿ ನಿಯಮಾನುಸಾರ ಮುಂದುವರೆಯಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.