ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ಅವರ ಮುಂಬೈ ನಿವಾಸದಲ್ಲಿ ಈ ತಿಂಗಳ ಆರಂಭದಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ, ಒಬ್ಬ ಪುರುಷ ಮತ್ತು ಒಬ್ಬ ಮಹಿಳೆ ಅತಿಕ್ರಮಣ ಪ್ರವೇಶಿಸಲು ಯತ್ನಿಸಿದ್ದಾರೆ. ಇವರಿಬ್ಬರನ್ನು ವಶಕ್ಕೆ ಪಡೆಯಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಈ ಮಧ್ಯೆ, CNN-News18 ಗೆ ಲಭ್ಯವಾದ ಮಾಹಿತಿಯ ಪ್ರಕಾರ, ಇಶಾ ಛಾಬ್ರಾ ಎಂದು ಗುರುತಿಸಲಾದ ಮಹಿಳೆ, ತಾನು ಅಲ್ಲಿನ ನಿವಾಸಿಗಳನ್ನು ಬಲ್ಲೆ ಎಂದು ಭದ್ರತಾ ಸಿಬ್ಬಂದಿಗೆ ಹೇಳಿ ಅಪಾರ್ಟ್ಮೆಂಟ್ ಪ್ರವೇಶಿಸಿದ್ದರು. ಆದರೆ, ಗ್ಯಾಲಕ್ಸಿ ಅಪಾರ್ಟ್ಮೆಂಟ್ ಒಳಗೆ ಪ್ರವೇಶಿಸಿದ ನಂತರ, ಅವರು ನೇರವಾಗಿ ಸಲ್ಮಾನ್ ಖಾನ್ ಅವರ ಮನೆಗೆ ತೆರಳಿ, ಗಂಟೆ ಬಾರಿಸಿದ್ದಾರೆ.
ಈ ಭದ್ರತಾ ಲೋಪ ಸಂಭವಿಸಿದಾಗ ಸಲ್ಮಾನ್ ಖಾನ್ ಮನೆಯಲ್ಲಿಯೇ ಇದ್ದರು ಎಂದು ಹೇಳಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ, ಇಶಾ, ತನ್ನ ಕೆಲವು ಗಂಟೆಗಳ ಮೊದಲು ಖಾನ್ ಅವರ ನಿವಾಸಕ್ಕೆ ನುಸುಳಿದ್ದ ವ್ಯಕ್ತಿ ತನಗೆ ಪರಿಚಯವಿಲ್ಲ ಎಂದು ಹೇಳಿಕೊಂಡಿದ್ದಾರೆ. ಈ ನಡುವೆ, ಇಶಾ ಪರಿಚಯವಿದೆಯೇ ಎಂದು ಖಚಿತಪಡಿಸಿಕೊಳ್ಳಲು ಗ್ಯಾಲಕ್ಸಿ ಅಪಾರ್ಟ್ಮೆಂಟ್ನ ನಿವಾಸಿಗಳನ್ನು ಶೀಘ್ರದಲ್ಲೇ ವಿಚಾರಣೆ ನಡೆಸುವ ಸಾಧ್ಯತೆಯಿದೆ.
ಮೇ 20ರ ಮುಂಜಾನೆ ಇಶಾ, ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಪ್ರವೇಶಿಸಿದ್ದರು. ಸಲ್ಮಾನ್ ಖಾನ್ ಅವರ ಕಟ್ಟಡದ ಲಿಫ್ಟ್ ಬಳಿ ಭದ್ರತಾ ಸಿಬ್ಬಂದಿ ಅವರನ್ನು ಹಿಡಿದಿದ್ದಾರೆ ಎಂದು ತಿಳಿದುಬಂದಿದೆ. ನಂತರ ಅವರನ್ನು ಬಾಂದ್ರಾ ಪೊಲೀಸರಿಗೆ ಒಪ್ಪಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ.
ಈ ಮಹಿಳೆಯ ಜೊತೆಗೆ, ಮೇ 20ರಂದು ಸಂಜೆ 7:15ರ ಸುಮಾರಿಗೆ ಒಬ್ಬ ಪುರುಷ ಕೂಡ ಬಾಲಿವುಡ್ ಸೂಪರ್ಸ್ಟಾರ್ ಮನೆಗೆ ಪ್ರವೇಶಿಸಲು ಯತ್ನಿಸಿದ್ದ. ಆತನನ್ನು ಕೂಡ ಭದ್ರತಾ ಸಿಬ್ಬಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಹೆಚ್ಚಿನ ವಿವರಗಳು ಲಭ್ಯವಾಗಬೇಕಿದೆ. ಆದರೆ, ಈ ಘಟನೆಗಳು ದೀರ್ಘಕಾಲದಿಂದ ಕೊಲೆ ಬೆದರಿಕೆಗಳನ್ನು ಎದುರಿಸುತ್ತಿರುವ ಸಲ್ಮಾನ್ ಖಾನ್ ಅವರ ಭದ್ರತೆಯ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕಿವೆ.
ಏಪ್ರಿಲ್ 2024ರಲ್ಲಿ, ಖಾನ್ ಅವರ ಬಾಂದ್ರಾ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಹೊರಗೆ ಗುಂಡಿನ ದಾಳಿ ಕೂಡ ನಡೆದಿತ್ತು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈ ದಾಳಿಯ ಹಿಂದೆ ಇದೆ ಎಂದು ನಂತರ ವರದಿಯಾಗಿತ್ತು, ಗ್ಯಾಂಗ್ಸ್ಟರ್ ಸಹೋದರ ಅನ್ಮೋಲ್ ಬಿಷ್ಣೋಯ್ ಫೇಸ್ಬುಕ್ ಪೋಸ್ಟ್ ಮೂಲಕ ಗುಂಡಿನ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದರು. ಈ ಆಘಾತಕಾರಿ ಘಟನೆಯ ನಂತರ, ಸಲ್ಮಾನ್ ಅವರ ಭದ್ರತೆಯನ್ನು ಹೆಚ್ಚಿಸಲಾಗಿತ್ತು.
ನಂತರ ಜುಲೈನಲ್ಲಿ, ಸಲ್ಮಾನ್ ಖಾನ್ ಅವರು ಮನೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು, ಆ ಸಮಯದಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ತಮ್ಮನ್ನು ಕೊಲ್ಲಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿಕೊಂಡಿದ್ದರು.