ಬಳ್ಳಾರಿ : ಜಿಲ್ಲೆಯಲ್ಲಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಸಿರುಗುಪ್ಪ ತಾಲ್ಲೂಕು, ಕಂಪ್ಲಿ ಹಾಗೂ ತೆಕ್ಕಲಕೋಟೆ ಪಟ್ಟಣಗಳಲ್ಲಿ ಗಣಪತಿ ವಿಸರ್ಜನೆ ದಿನಗಳಾದ 11ನೇ ದಿನ ಮತ್ತು 13 ನೇ ದಿನಗಳಂದು ಮದ್ಯ ಮಾರಾಟ, ಮದ್ಯ ಸಾಗಾಣಿಕೆ ಮಾಡದಂತೆ, ಮದ್ಯದಂಗಡಿ, ಬಾರ್-ರೆಸ್ಟೋರೆಂಟ್ಗಳನ್ನು ತೆರೆಯದಂತೆ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21ರನ್ವಯ ಪ್ರದತ್ತ ಅಧಿಕಾರ ಚಲಾಯಿಸಿ, ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಯೂ ಆದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶಿಸಿದ್ದಾರೆ.
ಸಿರುಗುಪ್ಪ ತಾಲ್ಲೂಕಿನಲ್ಲಿ ಗಣಪತಿ ವಿಸರ್ಜನೆಯ 11ನೇ ದಿನವಾದ ಸೆ.06 ರಂದು ಬೆಳಿಗ್ಗೆ 06 ಗಂಟೆಯಿಂದ ಸೆ.07 ರ ಬೆಳಿಗ್ಗೆ 06 ಗಂಟೆಯವರೆಗೆ, ಕಂಪ್ಲಿ ಹಾಗೂ ತೆಕ್ಕಲಕೋಟೆ ಪಟ್ಟಣಗಳಲ್ಲಿ ಗಣಪತಿ ವಿಸರ್ಜನೆಯ 13ನೇ ದಿನವಾದ ಸೆ.08 ರಂದು ಬೆಳಿಗ್ಗೆ 06 ಗಂಟೆಯಿಂದ ಸೆ.09 ರ ಬೆಳಿಗ್ಗೆ 06 ಗಂಟೆಯವರೆಗೆ ಮದ್ಯ ಮಾರಾಟ, ಮದ್ಯ ಸಾಗಾಣಿಕೆ ಹಾಗೂ ಮದ್ಯದಂಗಡಿ, ಬಾರ್-ರೆಸ್ಟೋರೆಂಟ್ಗಳನ್ನು ತೆರೆಯುವಂತಿಲ್ಲ. ಈ ಆದೇಶವು ಡಿಸ್ಟಲರೀಸ್ ರಾಜ್ಯ ವಿವಿಧ ಕೆಎಸ್ಪಿಬಿಸಿಎಲ್ ಡಿಪೊಗಳಿಗೆ ದಾಸ್ತಾನು ವಿಲೇವಾರಿ ಮಾಡಲು ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶದಲ್ಲಿ ತಿಳಿಸಿದ್ದಾರೆ.