BIG NEWS: ಸೈಫ್‌ಗೆ ಚಾಕು ಇರಿತ ಪ್ರಕರಣ ; ಆರೋಪಿ ವಿರುದ್ಧ 1000 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ

ಜನವರಿ 16ರ ಮುಂಜಾನೆ ಬಾಂದ್ರಾದ ತಮ್ಮ ನಿವಾಸದಲ್ಲಿ ಕಳ್ಳತನಕ್ಕೆ ಯತ್ನಿಸಿದ ದುಷ್ಕರ್ಮಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಬಾಲಿವುಡ್ ನಟ ಸೈಫ್ ಅಲಿ ಖಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂದ್ರಾ ಪೊಲೀಸರು ಮಹತ್ವದ ಬೆಳವಣಿಗೆಯೊಂದರಲ್ಲಿ 1000ಕ್ಕೂ ಹೆಚ್ಚು ಪುಟಗಳ ದೋಷಾರೋಪ ಪಟ್ಟಿಯನ್ನು ಸ್ಥಳೀಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಪೊಲೀಸರ ತನಿಖೆಯಲ್ಲಿ ಬಂಧಿತನಾಗಿರುವ 30 ವರ್ಷದ ಶರಿಫುಲ್ ಇಸ್ಲಾಂ ಎಂಬ ಬಾಂಗ್ಲಾದೇಶದ ಪ್ರಜೆಯ ವಿರುದ್ಧ ಪೊಲೀಸರು ಬಲವಾದ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ. ಈ ದೋಷಾರೋಪ ಪಟ್ಟಿಯಲ್ಲಿ ಆರೋಪಿಯ ಮುಖ ಗುರುತಿಸುವಿಕೆ ಪರೀಕ್ಷೆಯ ಫಲಿತಾಂಶ, ಬೆರಳಚ್ಚು ವರದಿಗಳು, ಗುರುತು ಪತ್ತೆ ಮೆರವಣಿಗೆಯ ವರದಿ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳು ಸೇರಿವೆ. ಅಲ್ಲದೆ, ಘಟನಾ ಸ್ಥಳದಲ್ಲಿ ಪತ್ತೆಯಾಗಿದ್ದ ಚಾಕುವಿನ ತುಂಡುಗಳು ಪರಸ್ಪರ ಹೊಂದಾಣಿಕೆಯಾಗಿದ್ದು, ಇದು ಆರೋಪಿಯ ಕೃತ್ಯಕ್ಕೆ ಪುಷ್ಟಿ ನೀಡುವ ಪ್ರಮುಖ ಸಾಕ್ಷ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ವಿವರಗಳ ಪ್ರಕಾರ, ಜನವರಿ 16ರ ಮುಂಜಾನೆ ಸುಮಾರು 2 ಗಂಟೆಗೆ ಗುರುತು ಪರಿಚಯವಿಲ್ಲದ ವ್ಯಕ್ತಿಯೊಬ್ಬ ಬಾಂದ್ರಾ ಪಶ್ಚಿಮದಲ್ಲಿರುವ ಸೈಫ್ ಅಲಿ ಖಾನ್ ಅವರ 11 ಮತ್ತು 12ನೇ ಮಹಡಿಯ ನಿವಾಸಕ್ಕೆ ಕಳ್ಳತನದ ಉದ್ದೇಶದಿಂದ ಅಕ್ರಮವಾಗಿ ಪ್ರವೇಶಿಸಿದ್ದನು. ಆರೋಪಿ ನೇರವಾಗಿ 11ನೇ ಮಹಡಿಯಲ್ಲಿ ಸೈಫ್ ಅವರ ನಾಲ್ಕು ವರ್ಷದ ಮಗ ಜೆಹಾಂಗೀರ್ (ಜೆಹ್) ನ ಮಲಗುವ ಕೋಣೆಯ ಪಕ್ಕದಲ್ಲಿದ್ದ ಬಾತ್‌ರೂಮ್‌ಗೆ ನುಗ್ಗಿದ್ದು, ಅಲ್ಲಿ ಮಗುವಿನ ದಾದಿಯನ್ನು ಕಂಡ ಆರೋಪಿ ಆಕೆಗೆ ಹಲ್ಲೆ ಮಾಡಿದ್ದಾನೆ.

ಒಡನೆಯೇ ಗಲಾಟೆಯ ಸದ್ದು ಕೇಳಿ ಎಚ್ಚೆತ್ತ ಸೈಫ್ ಅಲಿ ಖಾನ್ ಮಗನ ಕೋಣೆಗೆ ಧಾವಿಸಿ ಬಂದಿದ್ದಾರೆ. ಆಗ ದುಷ್ಕರ್ಮಿಯನ್ನು ತಡೆಯಲು ಪ್ರಯತ್ನಿಸಿದಾಗ, ಆತ ತೀಕ್ಷ್ಣವಾದ ಆಯುಧದಿಂದ ಸೈಫ್ ಅವರ ಕುತ್ತಿಗೆಗೆ ಆರು ಬಾರಿ ಇರಿದಿದ್ದಾನೆ. ಇದರಿಂದ ಸೈಫ್ ಅವರ ಹಿಡಿತ ಸಡಿಲಗೊಂಡಿದೆ. ನಂತರ ಸೈಫ್ ಮತ್ತು ಇತರರು ಕೋಣೆಯಿಂದ ಹೊರಬಂದು ಬಾಗಿಲು ಹಾಕಿದ್ದಾರೆ. ಆದರೂ, ಆರೋಪಿ ಒಳಗೆ ಬಂದ ದಾರಿಯಲ್ಲೇ ಪರಾರಿಯಾಗಲು ಯಶಸ್ವಿಯಾಗಿದ್ದಾನೆ. ಈ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಸೈಫ್ ಅಲಿ ಖಾನ್ ಅವರನ್ನು ತಕ್ಷಣವೇ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಜನವರಿ 19ರಂದು ಆರೋಪಿ ಶರಿಫುಲ್ ಇಸ್ಲಾಂನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ತನಿಖೆಯ ವೇಳೆ ಆರೋಪಿಯು ಬಾಂಗ್ಲಾದೇಶದ ಪ್ರಜೆ ಎಂದು ತಿಳಿದುಬಂದಿದೆ. ಅಲ್ಲದೆ, ಆತನ ಉದ್ದೇಶ ಕೇವಲ ಕಳ್ಳತನವಾಗಿತ್ತು ಮತ್ತು ಆ ಮನೆ ಖ್ಯಾತ ನಟನದೆಂದು ಆತನಿಗೆ ತಿಳಿದಿರಲಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಸದ್ಯಕ್ಕೆ ಆರೋಪಿ ವಿರುದ್ಧ ಬಲವಾದ ಸಾಕ್ಷ್ಯಗಳು ಲಭ್ಯವಿದ್ದು, ಶೀಘ್ರದಲ್ಲೇ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗುವ ಸಾಧ್ಯತೆ ಇದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read