ಬೆಂಗಳೂರು: ಬಿಜೆಪಿ ಶಾಸಕರಾದ ಶಿವರಾಮ್ ಹೆಬ್ಬಾರ್ ಹಾಗೂ ಎಸ್.ಟಿ.ಸೋಮಶೇಖರ್ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಿ ಹೈಕಮಾಂಡ್ ಆದೇಶ ಹೊರಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಎಸ್.ಟಿ,ಸೋಮಶೇಖರ್, ಕೊನೆಗೂ ನಿರ್ಧಾರ ಕೈಗೊಂಡಿದ್ದಾರೆ. ಹಾಗಾಗಿ ಬಹಳ ಸಂತೋಷ ಎಂದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸೋಮಶೇಖರ್, ಪಕ್ಷದಿಂದ ಉಚ್ಛಾಟನೆ ಮಾಡ್ತಾರೆ ಎಂಬುದು ಗೊತ್ತಿತ್ತು. ಆದರೆ ಯಾವಾಗ ಮಾಡ್ತಾರೆ ಎಂದು ಗೊತ್ತಿರಲಿಲ್ಲ. ಇದಕ್ಕೂ ಮೊದಲು ನೋಟಿಸ್ ನೀಡಿದ್ದರು. ಅಮಿತ್ ಶಾ ಕೂಡ ಮಾತನಾಡಿದ್ದರು. ಕ್ಷೇತ್ರದ ವಿಚಾರ ಸರಿಪಡಿಸದಿದ್ದರೆ ಪಕ್ಷದಲ್ಲಿ ಮುಂದುವರಿಯಲ್ಲ ಎಂದಿದ್ದೆ. ನೋಟಿಸ್ ನಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿರುವುದಕ್ಕೆ ಕ್ರಮ ಎಂದಿತ್ತು. ಆದರೆ ಯಾವಾಗ ಉಚ್ಛಾಟನೆ ಮಾಡುತ್ತಾರೆ ಎಂದು ಗೊತ್ತಿರಲಿಲ್ಲ. ಕೊನೆಗೂ ಇಂದು ನಿರ್ಧಾರ ಪ್ರಕಟಿಸಿದ್ದಾರೆ. ಬಹಳ ಸಂತೋಷವಾಗಿದೆ ಎಂದರು.
ಪಕ್ಷದಿಂದ ಉಚ್ಛಾಟನೆ ಮಾಡಿದರೂ ಇನ್ನೂ ಮೂರು ವರ್ಷ ಶಾಸಕರಾಗಿಯೇ ಇರುತ್ತೇವೆ. ಕ್ಷೇತ್ರದ ಕೆಲಸಗಳನ್ನು ಮಾಡಿಕೊಂಡು ಹೋಗುತ್ತೇನೆ. ಅದಕ್ಕೆ ಯಾವುದೇ ಅಡ್ಡಿಯೂ ಇಲ್ಲ. 2028ರ ವೇಳೆಗೆ ಚುನಾವಣೆ ಘೋಷಣೆಯಾದಾಗ ಮುಂದೆ ಯಾವ ನಡೆ ಅನುಸರಿಸಬೇಕು ಎಂಬುದನ್ನು ನಿರ್ಧರಿಸುತ್ತೇವೆ ಎಂದರು.
ಇನ್ನು ಯತ್ನಾಳ್ ಉಚ್ಛಾಟನೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಅವರ ವಿರುದ್ಧ ಕ್ರಮಕ್ಕೂ ನಮಗೂ ಬಹಳ ವ್ಯತ್ಯಾಸವಿದೆ. ಯತ್ನಾಳ್ ಪಕ್ಷದ ಹಿರಿಯ ನಾಯಕರ ವಿರುದ್ಧವೇ ಆರೋಪಗಳನ್ನು ಮಾಡುತ್ತಿದ್ದರು. ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಬಹಳ್ಷ್ಟು ಬಾರಿ ನೇರವಾಗಿ ಮಾತನಡಿದ್ದರು. ಅವಮಾನ ಮಾಡಿದ್ದರು. ವಿಜಯೇಂದ್ರ ಬಗ್ಗೆಯೂ ಅವಮಾನ ಮಾಡಿದ್ದರು.ಸಾಕಷ್ಟು ಆರೋಪ ಮಾಡಿದ್ದರು. ಅಂತಹ ಒಂದೇ ಒಂದು ಕೆಲಸವನ್ನು ನಾನು ಮಾಡಿಲ್ಲ. ಯಾವ ಹಿರಿಯ ನಾಯಕರ ಬಗ್ಗೆಯೂ ನಾನು ಮಾತನಾಡಿಲ್ಲ, ಆರೋಪ ಮಾಡಿಲ್ಲ, ಮಾಡುವುದೂ ಇಲ್ಲ. ಆದರೂ ಉಚ್ಛಾಟನೆ ಮಾಡಿದ್ದಾರೆ. ಇನ್ನು ಮುನಿರತ್ನನಂತವರನ್ನು ಉಚ್ಛಾಟಿಸದೇ ಪಕ್ಷದಲ್ಲಿ ಇಟ್ಟುಕೊಂಡಿದ್ದಾರೆ. ವಿಧಾನಸೌಧದ ಕೊಠಡಿಯಲ್ಲಿ ರೇಪ್ ಮಾಡಿದ ಘಟನೆಯನ್ನು ಎಲ್ಲದರೂ ಕೇಳಿದ್ದರೀರಾ? ಹೆಚ್ ಐವಿ ಇಂಜಕ್ಷನ್ ಚುಚ್ಚಿ ಏಡ್ಸ್ ಹರಡಿಸುವ ಯತ್ನ ಮಾಡಿದ್ದಾರೆ ಇಂತಹ ಕೆಲಸ ಯರಾದರೂ ಮಾಡುವುದನ್ನು ಕೇಳಿದ್ದೀರಾ ಇಂತವರನ್ನೆಲ್ಲ ಪಕ್ಷದಲ್ಲಿ ಇಟ್ಟುಗೊಂಡು ಬೆಳೆಸಲಾಗುತ್ತಿದೆ. ಬಿಜೆಪಿ ಅಂತಹ ನಿಷ್ಠಾವಂತ ಪಕ್ಷವಾಗಿದ್ದರೆ ಕೊಡಲೇ ಇಂತವರನ್ನು ಉಚ್ಚಾಟನೆ ಮಾಡಿ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕಿತ್ತು. ನನ್ನ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಆರೋಪ ಕಾರಣವೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇರಲಿ ಕೊನೆಗೂ ಪಕ್ಷ ನಿರ್ಧಾರ ಕೈಗೊಂಡಿದೆ ಸ್ವಾಗತ. ಬಹಳ ಸಂತೋಷ ಎಂದು ಹೇಳಿದರು.