ನಿಮ್ಮಂತವರು ಪಕ್ಷ ಬಿಟ್ಟು ಹೋದರೇನೆ ಸರಿ: ಯತ್ನಾಳ್, ಸುಧಾಕರ್ ಗೆ ಎಸ್.ಆರ್.ವಿಶ್ವನಾಥ್ ಟಾಂಗ್

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಆಂತರಿಕ ಕಲಹ, ಬಣ ಬಡಿದಾಟ ತಾರಕಕ್ಕೇರಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಯತ್ನಾಳ್, ಸಂಸದ ಡಾ.ಕೆ.ಸುಧಾಕರ್ ವಾಗ್ದಾಳಿ ನಡೆಸಿರುವ ಬೆನ್ನಲ್ಲೇ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ನಿಮ್ಮಂತವರು ಪಕ್ಷ ಬಿಟ್ಟು ಹೋಗುವುದೇ ಸರಿ ಎಂದು ಟಾಂಗ್ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್.ಆರ್.ವಿಶ್ವನಾಥ್, ಸುಧಾಕರ್, ರಾಜ್ಯಾಧ್ಯಕ್ಷ ವಿಜಯೇಂದ್ರ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ಏನೇ ಸಮಸ್ಯೆ ಇದ್ದರೂ ರಾಜ್ಯಾಧ್ಯಕ್ಷರ ಜೊತೆ ಚರ್ಚಿಸಬೇಕಿತ್ತು. ಪರೋಕ್ಷವಾಗಿ ನನ್ನ ಕ್ಷೇತ್ರದ ಬಗ್ಗೆಯೂ ಮಾತನಾಡಿದ್ದಾರೆ. ನನ್ನಿಂದಲೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು ಎಂದು ಸುಧಾಕರ್ ಮಾತನಾಡುತ್ತಿದ್ದಾರೆ. ಸಮರ್ಥ ಸಚಿವನಾಗಿದ್ದರೆ, ಚಿಕ್ಕಬಳ್ಳಾಪುರಕ್ಕೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದಾಗ್ಯೂ ಯಾಕೆ ಸೋತಿರಿ? ಎಂದು ಪ್ರಶ್ನಿಸಿದ್ದಾರೆ.

ಸುಧಾಕರ್ ಹಾಗೂ ಯತ್ನಾಳ್ ಇಬ್ಬರೂ ಸ್ವತಂತ್ರವಾಗಿ ಗೆದ್ದು ಬನ್ನಿ ಆಗ ನಿಮ್ಮ ಜನಪ್ರಿಯತೆ ಒಪ್ಪಿಕೊಳ್ಳೋಣ. ಬಿಜೆಪಿಗೆ ಬಂದು ವಾಪಾಸ್ ಹೋದವರು ಉದ್ಧಾರ ಆಗಿದ್ದು ಇಲ್ಲ. ಇದು ಮಾಜಿ ಸಿಎಂ ಯಡಿಯೂರಪ್ಪ ಅವರಿಗೂ ಅನ್ನಿಸಿದೆ. ಸುಧಾಕರ್ ಅವರೇ ನೀವು ಪಕ್ಷದಲ್ಲೇ ಇರಿ ನಾಳೆ ಸಿಎಂ ಆಗಬಹುದು ಎಂದು ನಾವಂತು ಹೇಳಲ್ಲ. ಹೋದರೆ ಸನ್ಮಾನ ಮಾಡಿ ಕಳಿಸಿಕೊಟ್ಟು ಪಕ್ಷ ಸಂಘಟನೆ ಮಾಡುತ್ತೇವೆ ಎಂದು ಹೇಳಿದರು.

ರಾಜ್ಯಾಧ್ಯಕ್ಷರು ನನಗೆ ಅವಕಾಶ ಕೊಟ್ಟು ನೋಡಲಿ ನಾನೇ ಚಿಕ್ಕಬಳ್ಳಾಪುರದಲ್ಲಿ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತೇನೆ. ಕೋಲಾರದಲ್ಲಿಯೂ ಸಂಘಟನೆ ಮಾಡಿ ತೋರಿಸುತ್ತೇನೆ. ನಾನು ಸ್ನೇಹಕ್ಕೂ ಸಿದ್ಧ ಸಮರಕ್ಕೂ ಬದ್ಧ. ಸುಧಾಕರ್ ನೂರಕ್ಕೆ ನೂರು ಪಕ್ಷದಲ್ಲಿ ಇರಲ್ಲ. ಯತ್ನಾಳ್ ಕೂಡ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಪಕ್ಷದಿಂದ ಒಂದು ಕಾಲು ಹೊರಗಿಟ್ಟು ಮಾತನಾಡುತ್ತಿದ್ದಾರೆ. ನಿಮ್ಮಂತವರು ಪಕ್ಷ ಬಿಟ್ಟು ಹೋದರೇನೆ ಸರಿ. ಹೋಗುವುದಾದರೆ ಹೋಗಿ ಎಂದು ಹೇಳಿದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read