ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಕ್ಷೇತ್ರ ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ ಇಂದು ಆರ್.ಎಸ್.ಎಸ್. ಪಥಸಂಚಲನ ನಡೆಯಲಿದೆ.
ಬಹುಚರ್ಚಿತವಾಗಿ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಪಥಸಂಚಲನ ಹೈಕೋರ್ಟ್ ಅನುಮತಿಯೊಂದಿಗೆ ನವೆಂಬರ್ 16ರಂದು ಮಧ್ಯಾಹ್ನ 3.30 ರಿಂದ ಸಂಜೆ 5:45 ರವರೆಗೆ ನಡೆಯಲಿದೆ. ಬಜಾಜ್ ಕಲ್ಯಾಣ ಮಂಟಪದಿಂದ ಎಪಿಎಂಸಿ ಆವರಣದವರೆಗೆ ಪಥಸಂಚಲನ ನಡೆಯಲಿದ್ದು, 1.5 ಕಿಲೋ ಮೀಟರ್ ಪಥಸಂಚಲನಕ್ಕೆ ಸ್ಥಳೀಯ ಆಡಳಿತ ಅನುಮತಿ ನೀಡಿದೆ.
ತಾಲೂಕು ಆಡಳಿತ ಹಾಗೂ 1000 ಪೊಲೀಸರು ಭಾರೀ ಭದ್ರತೆ ಕೈಗೊಂಡಿದ್ದಾರೆ. ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ನಗರದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಅಕ್ಟೋಬರ್ 16 ರಂದು ಚಿತ್ತಾಪುರದಲ್ಲಿ
ಆರ್‌ಎಸ್‌ಎಸ್ ಪಥಸಂಚಲನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿದ್ದು, ಇತ್ತೀಚೆಗೆ ನ್ಯಾಯಾಲಯ ಅನುಮತಿ ನೀಡಿದ್ದು, ಇಂದು ಪಥಸಂಚಲನ ನಡೆಯಲಿದೆ.
ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ಇದಕ್ಕೆ ಪ್ರಿಯಾಂಕ್ ಖರ್ಗೆ ಕಾರಣ ಎಂದು ಆರ್.ಎಸ್.ಎಸ್. ಕೋರ್ಟ್ ಮೊರೆ ಹೋಗಿತ್ತು. ಬಳಿಕ ಕೋರ್ಟ್ ಅಂಗಳದಲ್ಲಿ ಕಲಬುರಗಿ ಜಿಲ್ಲಾಡಳಿತ ಅನುಮತಿ ನೀಡಿತ್ತು. ನವೆಂಬರ್ 13ರಂದು ಕಲಬುರಗಿ ಹೈಕೋರ್ಟ್ ಪೀಠದಲ್ಲಿ ಅನುಮತಿ ದೊರೆತಿತ್ತು.
