ತುಮಕೂರು: ಸರ್ಕಾರಿ ಜಾಗಗಳು, ಸಾರ್ವಜನಿಕ ಸ್ಥಳಗಳು, ಉದ್ಯಾನವನ, ಶಾಲೆಗಳಲ್ಲಿ ಆರ್.ಎಸ್.ಎಸ್ ಸೇರಿದಂತೆ ಸಂಘ-ಸಂಸ್ಥೆಗಳ ಚಟುವಟಿಕೆ, ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಿರುವ ರಾಜ್ಯ ಸರ್ಕಾರದ ಕ್ರಮದ ಬಗ್ಗೆ ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎನ್.ರಾಜಣ್ಣ, ಆರ್.ಎಸ್.ಎಸ್ ಗೆ ನಿರ್ಬಂಧ ಹಾಕಲು ಸಾಧ್ಯವೇ? ಸಂಘ-ಸಂಸ್ಥೆಗಳು ಸಾರ್ವಜನಿಕ ಸ್ಥಳಗಳಲ್ಲಿ, ಖಾಲಿ ಜಾಗಗಳಲ್ಲಿ ಕಾರ್ಯಕ್ರಮಗಳನ್ನು ಮಾಡಲು ಅನುಮತು ಪಡೆಯಬೇಕು ಎಂದು ನಿಯಮ ರೂಪಿಸಿದರೆ ಯಾರಾದರೂ ಕೇಳುತ್ತಾರಾ? ಇದನ್ನೆಲ್ಲ ನಿಯಂತ್ರಿಸಲು ಸಾಧ್ಯನಾ? ಎಂದು ಪ್ರಶ್ನಿಸಿದ್ದಾರೆ.
ಆರ್.ಎಸ್.ಎಸ್ ಆಗಲಿ ಯಾವುದೇ ಸಂಘ-ಸಂಸ್ಥೆಗಳಾಗಲಿ ಎಲ್ಲಾ ಕಾರ್ಯಕ್ರಮಗಳಿಗೆ ಅನುಮತಿ ಪಡೆಯುತ್ತಾ ಇರಲು ಆಗಲ್ಲ. ಹಾಗಾದರೆ ನಮಾಜ್ ಗೂ ಅನುಮತಿ ಪಡೆಯಬೇಕು. ಈಗ ನಮಾಜ್ ಮಾಡಬೇಡಿ ಎಂದರೆ ಕೇಳುತ್ತಾರಾ? ಅವರು ರಸ್ತೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಮಾಡುತ್ತಾರೆ. ರಸ್ತೆಗಳಲ್ಲಿ, ಬೇರೆ ಜಾಗಗಳಲ್ಲಿ ನಮಾಜ್ ಮಾಡಬಾರದು ಪೂರ್ವಾನುಮತಿ ಪಡೆದಿರಬೇಕು ಎಂದು ನಿಯಮ ಮಾಡಿದರೆ ಅವರು ಬಂದು ಕೇಳಿದರೂ ಇವರು ಅನುಮತಿ ನೀಡುತ್ತಾರಾ? ಅನುಮತಿ ಕೊಡಲು ಸಾಧ್ಯವೆ? ಹಾಗಾಗಿ ಯಾವುದು ಕಾನೂನು ಮಾಡಿ ಜಾರಿಗೆ ತರಬಹುದು ಅವುಗಳನ್ನು ಮಾತ್ರ ಕಾನೂನು ಮಾಡಬೇಕು. ಜಾರಿಗೊಳಿಸಲು ಸಾಧ್ಯವಿಲ್ಲದ ಕಾನೂನು ಮಾಡಿದರೆ ಅದು ಪುಸ್ತಕದಲ್ಲಿರುತ್ತದೆ ಅಷ್ಟೇ, ಜಾರಿಗೆ ಬರುವುದುಲ್ಲ ಎಂದು ಹೇಳಿದರು.