ಬೆಂಗಳೂರು : ಹಿಂದೆ ನಾನು ಸಿಎಂ ಆಗಿದ್ದಾಗ, ಅನ್ನಭಾಗ್ಯ, ಶಾದಿ ಭಾಗ್ಯ, ಶೂ ಭಾಗ್ಯ, ಇಂದಿರಾ ಕ್ಯಾಂಟೀನ್, ಮನಸ್ವಿನಿ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದೆ. ಯಾವುದೇ ಜಾತಿ – ಧರ್ಮದ ಬಡವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬಿ ಮುಖ್ಯವಾಹಿನಿಗಿ ಬರುವಂತಾಗಲು ಐದು ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ. 52,009 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಮೀಸಲಿಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬಡವರಪರ ನಾವು ಕೆಲಸ ಮಾಡುವುದನ್ನು ಸಹಿಸುವುದಿಲ್ಲ. ಬಡವರು ಶಕ್ತಿವಂತರಾದರೆ, ಅವರ ಮೇಲೆ ಶೋಷಣೆ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಅವರು ಸುಳ್ಳನ್ನು ಸತ್ಯ ಮಾಡಲು ಹೊರಟಿದ್ದಾರೆ. ಹಿಟ್ಲರ್ ಕಾಲದಲ್ಲಿ ಸುಳ್ಳು ಹೇಳಲೆಂದೇ ಒಬ್ಬ ಮಂತ್ರಿಯಿದ್ದಂತೆ, ಈಗ ವಿಪಕ್ಷ ನಾಯಕರು ಸುಳ್ಳು ಹೇಳುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಸಾಮಾಜಿಕ ನ್ಯಾಯವನ್ನು ಕೇಳಬಾರದೆಂಬುದೇ ಇಂತಹ ಪಟ್ಟಭದ್ರ ಹಿತಾಸಕ್ತಿಗಳ ಆಶಯವಾಗಿದೆ. ಜನರ ಆಶೀರ್ವಾದವಿರುವವರೆಗೆ ಸಿದ್ದರಾಮಯ್ಯನನ್ನು ಅಲುಗಾಡಿಸಲು ಸಾಧ್ಯವಿಲ್ಲ. ನಮ್ಮ ಸರ್ಕಾರ ಬಡವರಪರ ಕೆಲಸದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದರು.
ನಾನು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೇವೆಯನ್ನು ನೀಡುವ ಕೆಲಸ ಆರಂಭಿಸಿದ್ದೆ. ಖಾಸಗಿ ಆಸ್ಪತ್ರೆಗಳಿಗೆ ಹೋಗಲಾಗದೇ ರೋಗಿಗಳ ಸಾವು – ನೋವು ಸಂಭವಿಸಬಾರದೆಂಬ ಉದ್ದೇಶದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಇಂತಹ ಆಸ್ಪತ್ರೆಗಳನ್ನು ಪ್ರಾರಂಭಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದೆ. ಆದರೆ ನಂತರ ಬಿಜೆಪಿ ಸರ್ಕಾರ ಬಂದ ತಕ್ಷಣ ಈ ಯೋಜನೆ ಸ್ಥಗಿತಗೊಂಡಿತು. ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಯೋಜನೆಗೆ ಮಂಜೂರಾತಿ ನನ್ನ ಅವಧಿಯಲ್ಲಿ ನೀಡಲಾಗಿದ್ದು, ನಾನೇ ಯೋಜನೆಗೆ ಅಡಿಗಲ್ಲು ಹಾಕುತ್ತೇನೆ. ಪ್ರತಿ ಜಿಲ್ಲೆಗೆ ಒಂದು ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಇರಬೇಕು ಎಂಬುದು ನಮ್ಮ ಸರ್ಕಾರದ ಆಶಯವಾಗಿತ್ತು. ಆಸ್ಪತ್ರೆಯ ಶುಚಿತ್ವವನ್ನು ಕಾಯ್ದುಕೊಳ್ಳುವುದು ಬಹಳ ಮುಖ್ಯ. ಓಟಿ ಸೇರಿದಂತೆ ಹಲವು ಅತ್ಯಾಧುನಿಕ ಸೌಲಭ್ಯಗಳನ್ನು ಆಸ್ಪತ್ರೆಯಲ್ಲಿ ಒದಗಿಸಲಾಗಿದೆ. ಬಡವರಿಗೆ ಸಹಾಯ ಒದಗಿಸುವುದು ನಮ್ಮ ಸರ್ಕಾರದ ಬದ್ಧತೆಯಾಗಿದೆ ಎಂದರು.
https://twitter.com/siddaramaiah/status/1830635610471530583