ಕಾರಿಡಾರ್‌ನಲ್ಲಿ ಶೂ ರ್ಯಾಕ್ ಇಟ್ಟಿದ್ದಕ್ಕೆ 24,000 ರೂ. ದಂಡ ; ಬೆಂಗಳೂರಿನ ವಿಚಿತ್ರ ಪ್ರಕರಣ ಬಹಿರಂಗ !

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಅಪಾರ್ಟ್‌ಮೆಂಟ್ ಸಂಕೀರ್ಣವೊಂದರಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಅಲ್ಲಿನ ನಿವಾಸಿಯೊಬ್ಬರು ತಮ್ಮ ಮನೆಯ ಕಾರಿಡಾರ್‌ನಲ್ಲಿ ಶೂ ರ್ಯಾಕ್ ಇಟ್ಟಿದ್ದಕ್ಕಾಗಿ ಕಳೆದ ಎಂಟು ತಿಂಗಳಲ್ಲಿ ಬರೋಬ್ಬರಿ ₹24,000 ದಂಡ ಪಾವತಿಸಿದ್ದಾರೆ ! ಅಷ್ಟೇ ಅಲ್ಲದೆ, ಮುಂದಿನ ದಂಡದ ಮೊತ್ತಕ್ಕಾಗಿಯೂ ₹15,000 ಮುಂಗಡವಾಗಿ ಪಾವತಿಸಿ ತಮ್ಮ ಹಠವನ್ನು ಮುಂದುವರಿಸಿದ್ದಾರೆ.

ʼಪ್ರೆಸ್ಟೀಜ್ ಸನ್‌ರೈಸ್ ಪಾರ್ಕ್ʼ ಎಂಬ 1046 ಮನೆಗಳಿರುವ ಈ ಅಪಾರ್ಟ್‌ಮೆಂಟ್ ಸಂಕೀರ್ಣದ ನಿವಾಸಿಗಳ ಸಂಘವು, ಕಾರಿಡಾರ್‌ನಂತಹ ಸಾರ್ವಜನಿಕ ಸ್ಥಳಗಳಲ್ಲಿ ಶೂ ರ್ಯಾಕ್, ಕುಂಡಗಳಲ್ಲಿನ ಗಿಡಗಳು ಮತ್ತು ಶೇಖರಣಾ ಕ್ಯಾಬಿನೆಟ್‌ಗಳಂತಹ ವೈಯಕ್ತಿಕ ವಸ್ತುಗಳನ್ನು ಇಡುವುದನ್ನು ನಿಷೇಧಿಸಿತ್ತು. ಆರಂಭದಲ್ಲಿ ಇದಕ್ಕೆ ವಿರೋಧ ವ್ಯಕ್ತವಾದರೂ, ಸಂಘವು ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿ ನಿಯಮಗಳನ್ನು ವಿವರಿಸಿದ ನಂತರ ಹೆಚ್ಚಿನವರು ತಮ್ಮ ವಸ್ತುಗಳನ್ನು ತೆಗೆದುಹಾಕಲು ಒಪ್ಪಿಕೊಂಡರು. ಸಂಘವು ಇದಕ್ಕಾಗಿ ಎರಡು ತಿಂಗಳ ಗಡುವನ್ನು ನೀಡಿತ್ತು.

ಆದರೆ, ಇಬ್ಬರು ನಿವಾಸಿಗಳು ಮಾತ್ರ ತಮ್ಮ ಹಠವನ್ನು ಬಿಡಲಿಲ್ಲ. ಹಲವು ಬಾರಿ ತಿಳಿಸಿದರೂ ಒಬ್ಬರು ಮಾತ್ರ ನಿಯಮಕ್ಕೆ ಬದ್ಧರಾದರು. ಇನ್ನೊಬ್ಬ ವ್ಯಕ್ತಿ ಮಾತ್ರ ತಮ್ಮ ಅಪಾರ್ಟ್‌ಮೆಂಟ್‌ನ ಹೊರಗಿನ ಕಾರಿಡಾರ್‌ನಲ್ಲಿಟ್ಟಿದ್ದ ಶೂ ರ್ಯಾಕ್ ಅನ್ನು ತೆಗೆಯಲು ನಿರಾಕರಿಸಿದರು. ಕಳೆದ ಎಂಟು ತಿಂಗಳಲ್ಲಿ ಅವರಿಗೆ ₹24,000 ದಂಡ ವಿಧಿಸಲಾಗಿದ್ದರೂ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಅಚ್ಚರಿಯೆಂದರೆ, ಆ ವ್ಯಕ್ತಿ ಮುಂದಿನ ದಂಡದ ಮೊತ್ತಕ್ಕಾಗಿಯೂ ₹15,000 ಮುಂಗಡವಾಗಿ ಪಾವತಿಸಿ ತಮ್ಮನ್ನು ತೊಂದರೆಗೊಳಿಸದಂತೆ ಸಂಘಕ್ಕೆ ತಿಳಿಸಿದ್ದಾರೆ. ಇದರಿಂದ ಬೇಸತ್ತ ಅಪಾರ್ಟ್‌ಮೆಂಟ್ ಸಂಘವು ಈಗ ದೈನಂದಿನ ದಂಡವನ್ನು ₹100 ರಿಂದ ₹200 ಕ್ಕೆ ಹೆಚ್ಚಿಸಲು ನಿರ್ಧರಿಸಿದೆ.

ಇಂತಹ ಕಠಿಣ ನಿಯಮಗಳಿಗೆ ಕಾರಣವಿರುವುದು ಅಗ್ನಿ ಸುರಕ್ಷತೆ. ಎತ್ತರದ ಕಟ್ಟಡಗಳ ಕಾರಿಡಾರ್‌ಗಳು ಯಾವುದೇ ಅಡೆತಡೆಗಳಿಲ್ಲದೆ ಖಾಲಿಯಾಗಿರಬೇಕು. ತುರ್ತು ಪರಿಸ್ಥಿತಿಯಲ್ಲಿ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಇದು ಅತ್ಯಗತ್ಯ. ಆದರೆ, ಈ ನಿವಾಸಿ ಮಾತ್ರ ತಮ್ಮ ಹಠದಿಂದ ಸಂಘಕ್ಕೆ ತಲೆನೋವಾಗಿ ಪರಿಣಮಿಸಿದ್ದಾರೆ. ಅವರ ಈ ನಡೆಗೆ ಇತರ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read