ರಾಜಸ್ಥಾನದ ನೂತನ ಬೇವಾರ್ ಜಿಲ್ಲೆಯ ರಾಯಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಸ್ಥಳೀಯ ರೌಡಿಶೀಟರ್ ಒಬ್ಬ ತನ್ನದೇ ಡ್ರೈವರ್‌ನನ್ನು ಜೆಸಿಬಿ ಯಂತ್ರಕ್ಕೆ ತಲೆಕೆಳಗಾಗಿ ನೇತುಹಾಕಿ, ಬೆಲ್ಟ್‌ನಿಂದ ಅಮಾನವೀಯವಾಗಿ ಥಳಿಸಿದ್ದಾನೆ. ಈ ಘಟನೆ ಸುಮಾರು ಮೂರು ತಿಂಗಳ ಹಿಂದಿನದು ಎಂದು ಹೇಳಲಾಗುತ್ತಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆದ ವಿಡಿಯೋದಲ್ಲಿ, ರೌಡಿಶೀಟರ್ ತೇಜ್‌ಪಾಲ್ ಸಿಂಗ್ ಉದಾವತ್ ಎಂಬಾತ ತನ್ನ ಚಾಲಕನನ್ನು ಜೆಸಿಬಿ ಯಂತ್ರದ ಹುಕ್‌ಗೆ ಕಾಲುಗಳನ್ನು ಕಟ್ಟಿ ತಲೆಕೆಳಗಾಗಿ ನೇತುಹಾಕಿದ್ದಾನೆ. ಬಳಿಕ ಸುಮಾರು ಮೂರು ಗಂಟೆಗಳ ಕಾಲ ಆತನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ. ಗಾಯಗಳ ಮೇಲೆ ಉಪ್ಪು ಹಚ್ಚಿ ಚಿತ್ರಹಿಂಸೆ ನೀಡಿದ್ದಾನೆ. ಈ ಘಟನೆ ನಡೆಯುವಾಗ ಫಾರ್ಮ್‌ಹೌಸ್‌ನಲ್ಲಿ ಹಲವು ಜನ ಸೇರಿದ್ದರೂ, ರೌಡಿಶೀಟರ್‌ಗೆ ಭಯಪಟ್ಟು ಯಾರೂ ಚಾಲಕನನ್ನು ರಕ್ಷಿಸಲು ಮುಂದಾಗಿಲ್ಲ ಎಂದು ತಿಳಿದುಬಂದಿದೆ.
ಗುಡಿಯಾ ಗ್ರಾಮದ ನಿವಾಸಿಯಾಗಿರುವ ತೇಜ್‌ಪಾಲ್ ಸಿಂಗ್ ಉದಾವತ್, ತನ್ನ ಫಾರ್ಮ್‌ಹೌಸ್‌ನಲ್ಲಿ ಜೆಸಿಬಿ ಯಂತ್ರಗಳು ಮತ್ತು ಡಂಪರ್‌ಗಳನ್ನು ಹೊಂದಿದ್ದು, ಅಕ್ರಮವಾಗಿ ಜಲ್ಲಿಗಲ್ಲು ಗಣಿಗಾರಿಕೆ ಮತ್ತು ಸಾಗಾಟ ನಡೆಸುತ್ತಿದ್ದಾನೆ ಎಂದು ವರದಿಯಾಗಿದೆ. ಈತನ ವಿರುದ್ಧ ರಾಯಪುರ್ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಸುಮಾರು ಮೂರು ತಿಂಗಳ ಹಿಂದೆ ಡೀಸೆಲ್ ಕಳ್ಳತನದ ಶಂಕೆಯ ಮೇಲೆ ತನ್ನದೇ ಜೆಸಿಬಿ ಚಾಲಕನಿಗೆ ಈ ರೀತಿಯ ಶಿಕ್ಷೆ ನೀಡಿದ್ದಾನೆ ಎಂದು ಹೇಳಲಾಗಿದೆ.
ಈ ಕ್ರೂರ ವಿಡಿಯೋ ವೈರಲ್ ಆದ ಕೂಡಲೇ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷ ಗೋವಿಂದ್ ಸಿಂಗ್ ದೋತಾಸರಾ ಅವರು ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ರಾಜಸ್ಥಾನದಲ್ಲಿ ಬಿಜೆಪಿ ಅಲ್ಲ, ಮಾಫಿಯಾಗಳ ಆಡಳಿತ ನಡೆಯುತ್ತಿದೆ” ಎಂದು ಈ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇಂತಹ ಭೀಕರ ಘಟನೆಗಳು ಈ ಹಿಂದೆ ನಡೆದಿವೆ. ಮಾಫಿಯಾಗಳ ದಾಂಧಲೆ ಉತ್ತುಂಗದಲ್ಲಿದ್ದು, ಬಿಜೆಪಿಯ ದುರ್ಬಲ ಮತ್ತು ನಿರ್ಲಕ್ಷ್ಯದ ಆಡಳಿತದಿಂದಾಗಿ ಅಪರಾಧಿಗಳಿಗೆ ಕಾನೂನಿನ ಭಯವಿಲ್ಲ” ಎಂದು ಅವರು ಆರೋಪಿಸಿದ್ದಾರೆ. ಮಾಜಿ ಸಿಎಂ ಅಶೋಕ್ ಗೆಹ್ಲೋಟ್, ಚಿತ್ರಹಿಂಸೆ ನೀಡಿದ ಆರೋಪಿಯ ತಕ್ಷಣದ ಬಂಧನಕ್ಕೆ ಒತ್ತಾಯಿಸಿದ್ದಾರೆ.
ವಿಡಿಯೋ ಬೆಳಕಿಗೆ ಬಂದ ನಂತರ, ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ರೌಡಿಶೀಟರ್ ತೇಜ್‌ಪಾಲ್ ಸಿಂಗ್ ಉದಾವತ್‌ನನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆ ರಾಜಸ್ಥಾನದ ಕಾನೂನು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
राजस्थान में माफियाओं की गुंडागर्दी चरम पर है भाजपा सरकार में माफियाओं पर कानून का कोई खौफ नहीं है।
— Jitendra Hatwal (@Jitendra_Hatwal) May 24, 2025
गुंडों ने जिस तरह से एक व्यक्ति को जेसीबी से लटकाकर बुरी तरह मारपीट की यह तस्वीरें @PoliceRajasthan की नाकामी दिखाती है@BhajanlalBjp जी सत्ता संरक्षण में दलितों का दमन कब तक ? pic.twitter.com/4aOLIsL1aj