ಬೆಳಗಾವಿ: ಮೇಲಧಿಕಾರಿ ಕಿರುಕುಳಕ್ಕೆ ಬೇಸತ್ತು ನಾಪತ್ತೆಯಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪುರಸಭೆಯ ಕಂದಾಯ ನಿರೀಕ್ಷಕ ಅಧಿಕಾರಿ ಬೆಳಗಾವಿಯಲ್ಲಿ ಪತ್ತೆಯಾಗಿದ್ದಾರೆ.
ಭಟ್ಕಳದ ತಮ್ಮ ಮನೆಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ ಕಂದಾಯ ನಿರೀಕ್ಷಕ ವೆಂಕಟೇಶ್ ರಮೇಶ್ ಇದೀಗ ಬೆಳಗಾವಿಯಲ್ಲಿ ಪತ್ತೆಯಾಗಿದ್ದಾರೆ. ಪುರಸಭೆ ಮುಖ್ಯ ಅಧಿಕಾರಿ ಎಂ.ಆರ್.ಸ್ವಾಮಿ ವಿರುದ್ಧ ಕಿರುಕುಳ ಆರೋಪ ಮಾಡಿದ್ದ ವೆಂಕಟೇಶ್, ಈ ಬಗ್ಗೆ ಪತ್ರವೊಂದನ್ನು ಬರೆದು ಅದನ್ನು ಸಿಬ್ಬಂದಿಗಳ ವಾಟ್ಸಪ್ ಗ್ರೂಪ್ ಗೆ ಕಳುಹಿಸಿ ಬಳಿಕ ನಾಪತ್ತೆಯಾಗಿದ್ದರು. ವೆಂಕಟೇಶ್ ತಾಯಿ ಭಟ್ಕಳ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ದೂರು ದಾಖಲಾದ ವಿಷಯ ತಿಳಿಯುತ್ತಿದ್ದಂತೆ ವೆಂಕಟೇಶ್ ಮನೆಗೆ ಕರೆ ಮಾಡಿ ತಾನು ಬೆಳಗಾವಿಯಲ್ಲಿ ಇರುವುದಾಗಿ ತಿಳಿಸಿದ್ದಾರೆ. ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದು ಭಟ್ಕಳ ಠಾಣೆ ಪೊಲೀಸರು ಬೆಳಗಾವಿ ತಲುಪಿದ್ದಾರೆ. ಸದ್ಯ ವೆಂಕಟೇಶ್ ಬೆಳಗಾವಿ ಮಾರ್ಕೆಟ್ ಠಾಣೆಯಲ್ಲಿರುವುದು ತಿಳಿದುಬಂದಿದೆ.