ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಮುಧೋಳ ಸಮೀಪದ ಮಾಲಾಪುರ ಗ್ರಾಮದಲ್ಲಿ ಜಾತ್ರೆಯಲ್ಲಿ ಅಳವಡಿಸಿದ್ದ ಬ್ಯಾನರ್ ಹರಿದ ವಿಚಾರಕ್ಕೆ ಗಲಾಟೆಯಾಗಿ ಯುವಕನೊಬ್ಬನನ್ನು ಕೊಲೆ ಮಾಡಲಾಗಿದೆ.
ಮಾಲಾಪುರ ಗ್ರಾಮದ ಶ್ರೀ ಲಕ್ಷ್ಮಿ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಬ್ಯಾನರ್ ಅಳವಡಿಸಿದ್ದು, ಇದನ್ನು ಹರಿದು ಹಾಕಿದ ಕಾರಣಕ್ಕೆ ಗಲಾಟೆ ನಡೆದಿದೆ. ಈ ವೇಳೆ ಯುವಕನನ್ನು ಕೊಲೆ ಮಾಡಲಾಗಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಶನಿವಾರ ತಡರಾತ್ರಿ ಘಟನೆ ನಡೆದಿದೆ.
ಗಿರಿಗಾಂವ ಆರ್.ಸಿ. ಗ್ರಾಮದ ಮಂಜುನಾಥ ಶೀಲವಂತ(19) ಮೃತಪಟ್ಟ ಯುವಕ. ಆತನ ಸ್ನೇಹಿತ ಮಾಲಾಪುರದ ಯಲ್ಲಪ್ಪ ಗೊಂಪೆಗೋಳ(22) ಗಂಭೀರವಾಗಿ ಗಾಯಗೊಂಡಿದ್ದು, ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಲಾಪುರ ಜಾತ್ರೆಯಲ್ಲಿ ಬೇರೆ ಊರಿನವರಾದ ಮಂಜುನಾಥ ಬ್ಯಾನರ್ ಹಾಕಿದ್ದನ್ನು ಸಹಿಸದ ಮಾಲಾಪುರದ ಕೆಲ ಯುವಕರು ಬ್ಯಾನರ್ ಹರಿದು ಹಾಕಿದ್ದರು. ಇದೇ ವಿಚಾರಕ್ಕೆ ಗಲಾಟೆ ನಡೆದಿದ್ದು, ಮಂಜುನಾಥನನ್ನು ಕೊಲೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮುಧೋಳ ಪೊಲೀಸ್ ಠಾಣೆಯಲ್ಲಿ 10 ಮಂದಿ ವಿರುದ್ಧ ಕೇಸು ದಾಖಲಾಗಿದ್ದು, ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.