ಬೆಂಗಳೂರು: ರಾಜ್ಯದ 265 ಗ್ರಾಮ ಪಂಚಾಯಿತಿ ಸ್ಥಾನಗಳ ಉಪಚುನಾವಣೆಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಮೇ 25 ರಂದು ಮತದಾನ, ಮೇ 28ರಂದು ಫಲಿತಾಂಶ ಪ್ರಕಟಿಸಲಾಗುವುದು.
ರಾಜ್ಯ ಸರ್ಕಾರದ ಮನವಿಯ ಮೇರೆಗೆ ಮೇ 11ರಂದು ಗ್ರಾಮ ಪಂಚಾಯಿತಿಯ 265 ಸ್ಥಾನಗಳಿಗೆ ನಡೆಯಬೇಕಿದ್ದ ಉಪಚುನಾವಣೆಯನ್ನು ರಾಜ ಚುನಾವಣಾ ಆಯೋಗ ಮುಂದೂಡಿದ್ದು, ಇದೀಗ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಮೇ 8 ರಂದು ಉಪಚುನಾವಣೆಯ ಅಧಿಸೂಚನೆ ಪ್ರಕಟಿಸಲಿದ್ದು, ಮೇ 14ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಮೇ 15ರಂದು ಉಮೇದುವಾರಿಕೆ ಪರಿಶೀಲನೆ ನಡೆಯಲಿದೆ. ಮೇ 17ರಂದು ನಾಮಪತ್ರಗಳ ವಾಪಸ್ ಪಡೆದುಕೊಳ್ಳಲು ಕೊನೆಯ ದಿನವಾಗಿದ್ದು, ಮೇ 25 ರಂದು ಮತದಾನ ನಡೆಯಲಿದೆ. ಅಗತ್ಯ ಬಿದ್ದರೆ ಮೇ 27ರಂದು ಮರು ಮತದಾನ ನಡೆಸಲಾಗುವುದು. ಮೇ 28ರಂದು ಮತ ಎಣಿಕೆ ನಡೆಸಲಾಗುವುದು.
ರಾಜ್ಯದ 31 ಜಿಲ್ಲೆಗಳ 135 ತಾಲೂಕಿನ 223 ಗ್ರಾಮ ಪಂಚಾಯಿತಿಗಳ 265 ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.